ಮಂಗಳೂರು: ಕೊರೊನಾ ಸೋಂಕಿತನ ಸಹೋದರ ಗ್ರಾಮ ಪಂಚಾಯತ್ ಸಭೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಗ್ರಾ.ಪಂ. ಅಧ್ಯಕ್ಷೆ ಮತ್ತು ಪಿ.ಡಿ.ಒ ಸಹಿತ ಒಟ್ಟು 44 ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ಪಂಚಾಯತ್‍ನಲ್ಲಿ ಕೊರೊನಾ ರಕ್ಷಣಾ ಕಾರ್ಯಪಡೆಯ ಮೀಟಿಂಗ್ ನಡೆದಿತ್ತು. ಈ ಸಭೆಯಲ್ಲಿ ದುಬೈನಿಂದ ಬಂದು ಕೊರೊನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಸಹೋದರ ಕೂಡ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.
Advertisement
Advertisement
ಮಾರ್ಚ್ 18ರಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದ ವ್ಯಕ್ತಿ, ಅಜ್ಜಾವರದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದ. ನಂತರ ಮಾರ್ಚ್ 28 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮಾರ್ಚ್ 31ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇದಕ್ಕೂ ಮೊದಲು ಸೋಂಕಿತ ವ್ಯಕ್ತಿಯ ಸಹೋದರ ಸಭೆಯಲ್ಲಿ ಭಾಗಿಯಾಗಿದ್ದರು.
Advertisement
Advertisement
ಈ ಸೋಂಕಿತ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 13 ಮಂದಿ ಈಗಾಗಲೇ ಪ್ರತ್ಯೇಕ ಕ್ವಾರಂಟೈನ್ ಮಾಡಲಾಗಿತ್ತು. ಇದರ ಜೊತೆಗೆ ಈಗ ಗ್ರಾ.ಪಂ. ಅಧ್ಯಕ್ಷೆ, ಪಿ.ಡಿ.ಒ ಮತ್ತು ಎಂಟು ಮಂದಿ ಸದಸ್ಯರು ಸೇರಿ ಒಟ್ಟು 44 ಮಂದಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಸೋಂಕಿತ ಸಂಪರ್ಕದಲ್ಲಿದ್ದ 57 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.