ಮಂಗಳೂರು: ಕುಕ್ಕರ್ ಬಾಂಬ್ ಸ್ಫೋಟದ(Mangaluru Cooker Blast) ಉಗ್ರ ಶಾರೀಕ್(shariq) ಮಂಗಳೂರಿನ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಆತನ ಒಂದೊಂದೇ ಕೃತ್ಯಗಳು ರಾಷ್ಟ್ರೀಯ ತನಿಖಾ ದಳ(NIA) ತನಿಖೆಯಿಂದ ಹೊರ ಬೀಳುತ್ತಿದ್ದು ಈಗ ಈತ ಬಾಂಬ್ ತಯಾರಿಕೆ ಬೇಕಾದ ಸಾಮಾಗ್ರಿಗಳನ್ನು ಕೇರಳದ ಲಾಡ್ಜ್‌ಗಳಿಗೆ(Kerala Lodge) ತರಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಕಳೆದ ನವೆಂಬರ್ 19 ರಂದು ಮಂಗಳೂರಿನ ನಾಗುರಿಯಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟದ ಆರೋಪಿ ಶಾರೀಕ್ ಚೇತರಿಸಿಕೊಳ್ಳುತ್ತಿದ್ದಾನೆ. ಅಂದಿನಿಂದ ಇಂದಿನವರೆಗೂ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಈಗ ಶೇ.80 ರಷ್ಟು ಗುಣಮುಖನಾಗಿದ್ದಾನೆ.
ಎನ್‌ಐಎ ಅಧಿಕಾರಿಗಳು ಮಂಗಳೂರಿನಲ್ಲೇ ಬೀಡುಬಿಟ್ಟು ಶಾರೀಕ್‌ನ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ಸಮಯದಲ್ಲಿ ಕೇರಳದ ಕೊಚ್ಚಿಯ ಆಲುವಾದ ಕೆಲವು ಲಾಡ್ಜ್‌ಗಳಲ್ಲಿ ಬಾಂಬ್ ತಯಾರಿಸುತ್ತಿದ್ದ ವಿಚಾರವನ್ನು ಈತ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಶೃತಿ ಹರಿಹರನ್ ದಾಖಲಿಸಿದ್ದ ಕೇಸ್‌ಗೆ ತಡೆಯಾಜ್ಞೆ
ಆಲುವಾದ ರೈಲು ನಿಲ್ದಾಣ, ಬಸ್ಸು ನಿಲ್ದಾಣದ ಸಮೀಪದ ಹಲವು ಲಾಡ್ಜ್‌ಗಳಲ್ಲಿ ತಂಗಿದ್ದ ಶಾರೀಕ್ ಅಲ್ಲಿಗೆ ಕೊರಿಯರ್ ಮೂಲಕ ಬಾಂಬ್ ತಯಾರಿ ಸಾಮಾಗ್ರಿಗಳನ್ನು ತರಿಸಿಕೊಳ್ಳುತ್ತಿದ್ದ. ಆತ ಲಾಡ್ಜ್ ಬಿಟ್ಟು ಬಂದ ಬಳಿಕವೂ ಪಾರ್ಸೆಲ್ ಬರುತ್ತಿದ್ದು ಅದನ್ನು ಲಾಡ್ಜ್ ನವರು ಅವನಿಗೆ ತಲುಪಿಸುತ್ತಿದ್ದರು ಎನ್ನುವ ಮಾಹಿತಿ ಹೊರ ಬಿದ್ದಿದೆ. ಹೀಗಾಗಿ ಎಲ್ಲಾ ಲಾಡ್ಜ್‌ಗಳ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.