– ಅಗತ್ಯವಿಲ್ಲದಿದ್ದರೂ 1 ಕೋಟಿ ವ್ಯರ್ಥ
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಸುಂದರ ಭಾರತದ ಕನಸು ಕಾಣುತ್ತಿದ್ದು, ಅದಕ್ಕಾಗಿ ಕೆಲವೊಂದು ನಗರಗಳನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಬೇಕೆಂದು ನಿರ್ಧರಿಸಿ ದೇಶದ ಪ್ರಮುಖ ನಗರಗಳನ್ನು ಗುರುತಿಸಿ ಹಣವನ್ನೂ ಬಿಡುಗಡೆ ಮಾಡಿದ್ದಾರೆ.
ಈ ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯದ ಕರಾವಳಿಯ ಮಂಗಳೂರು ಸೇರ್ಪಡೆಗೊಂಡಿತ್ತು. ಅದರಂತೆ ಮಂಗಳೂರು ಸ್ಮಾರ್ಟ್ ಸಿಟಿಯೇನೋ ಆಗುತ್ತಿದೆ. ಅದಕ್ಕಾಗಿ ನೂರಾರು ಕೋಟಿ ಬಿಡುಗಡೆಯಾಗಿದ್ದೂ ಆಗಿದೆ. ಆದರೆ ಈ ಸ್ಮಾರ್ಟ್ ಸಿಟಿಯ ಹಣ ಹೇಗೆ ಬಳಕೆಯಾಗುತ್ತಿದೆ, ಜನರು ಕಟ್ಟಿದ ತೆರಿಗೆಯ ಹಣವನ್ನು ಸ್ಮಾರ್ಟ್ ನೆಪದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಗೆ ಜೇಬಿಗೆ ಇಳಿಸುತ್ತಿದ್ದಾರೆ ಅನ್ನೋದಕ್ಕೆ ಮಂಗಳೂರು ನಗರದಲ್ಲಿ ತಲೆ ಎತ್ತಿ ನಿಂತಿರೋ ಕ್ಲಾಕ್ ಟವರ್ ಜೀವಂತ ಉದಾಹರಣೆಯಾಗಿದೆ.
Advertisement
Advertisement
ಗಡಿಯಾರ ಗೋಪುರ ಎನ್ನುವ ಪರಿಕಲ್ಪನೆಯೇ ಮಾಸಿಹೋಗಿರುವ ಇಂದಿನ ಕಾಲದಲ್ಲಿ ಮಂಗಳೂರು ನಗರದ ಮಧ್ಯೆ ಬೃಹತ್ ಕ್ಲಾಕ್ ಟವರ್ ತಲೆಯೆತ್ತಿದೆ. ಅಷ್ಟೇ ಅಲ್ಲ ದೇಶದ ದುಬಾರಿ ಕ್ಲಾಕ್ ಟವರ್ ಅನ್ನುವ ಹಣೆಪಟ್ಟಿಯನ್ನೂ ಅಂಟಿಸಿಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಲಾಕ್ ಟವರ್ ನಿರ್ಮಿಸಿರುವುದು. ಮಂಗಳೂರಿನ ಹಂಪನಕಟ್ಟೆಯ ವೃತ್ತದ ಬಳಿ ಹಿಂದೆ 1968 ರಲ್ಲಿ ಜನರಿಗೆ ಸಮಯ ಗೊತ್ತಾಗಲೆಂದು ಕ್ಲಾಕ್ ಟವರ್ ನಿರ್ಮಿಸಲಾಗಿತ್ತು. ಗಂಟೆ ಗಂಟೆಗೆ ಬೆಲ್ ಮಾಡುತ್ತಾ ನಗರ ಭಾಗದ ಜನರನ್ನು ಎಚ್ಚರಿಸುತ್ತಿದ್ದ ಕ್ಲಾಕ್ ಟವರ್ ಜನರ ಕೈಗೆ ವಾಚ್ ಬರುತ್ತಿದ್ದಂತೆ ಅಪ್ರಸ್ತುತ ಎನ್ನುವಂತಾಗಿತ್ತು.
Advertisement
ಹೀಗಾಗಿ 1994ರಲ್ಲಿ ನಗರದ ಮಧ್ಯೆ ಟ್ರಾಫಿಕ್ ದಟ್ಟಣೆಗೆ ಕಾರಣವಾಗುತ್ತಿದೆ ಎಂದು ಹಳೆಯ ಕ್ಲಾಕ್ ಟವರನ್ನು ಕೆಡವಲಾಗಿತ್ತು. ಆದರೆ ಇದೀಗ 24 ವರ್ಷಗಳ ಬಳಿಕ ಅದೇ ಜಾಗದಲ್ಲಿ 75 ಅಡಿ ಎತ್ತರದಲ್ಲಿ ಕ್ಲಾಕ್ ಟವರ್ ನಿರ್ಮಿಸಲಾಗಿದೆ. ಹೆಚ್ಚೆಂದರೆ 20 ಲಕ್ಷ ಖರ್ಚು ಆಗಬಹುದಾದ ಟವರ್ ನಿರ್ಮಾಣಕ್ಕೆ ಒಂದು ಕೋಟಿ ವ್ಯಯಿಸಿದ್ದಾಗಿ ಹೇಳುತ್ತಿರುವ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಸ್ಮಾರ್ಟ್ ಹೆಸರಲ್ಲಿ ಜನರ ದುಡ್ಡನ್ನು ಜೇಬಿಗಿಳಿಸುತ್ತಿರುವುದಕ್ಕೆ ಜ್ವಲಂತ ನಿದರ್ಶನ ಎಂದು ಸ್ಥಳೀಯ ಸಾಮಾಜಿಕ ಹೋರಾಟಗಾರರಾದ ದಿನೇಶ್ ಹೊಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಮಂಗಳೂರಿಗೆ ಕ್ಲಾಕ್ ಟವರ್ ಅಗತ್ಯ ಇಲ್ಲದಿದ್ದರೂ, ಎರಡು ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಕವಿತಾ ಸನಿಲ್, ಹಲವರ ವಿರೋಧದ ಮಧ್ಯೆಯೇ ಟವರ್ ನಿರ್ಮಾಣಕ್ಕೆ ನಿರ್ಧರಿಸಿದ್ದರು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಸ್ಮಾರ್ಟ್ ಸಿಟಿಯ ಹೆಸರಲ್ಲಿ ನಡೆದ ಮೊದಲ ಯೋಜನೆಯೇ ಅತ್ಯಂತ ದುಬಾರಿ ಎನಿಸಿದೆ. ಹೀಗಾಗಿ ಸ್ಮಾರ್ಟ್ ಸಿಟಿ ನೆಪದಲ್ಲಿ ದುಂದುವೆಚ್ಚ ಮಾಡಲಾಗುತ್ತಿದೆ ಎಂಬ ಟೀಕೆ ಜಾಲತಾಣದಲ್ಲಿ ಜೋರಾಗಿದೆ. ಆದರೆ ಸ್ಮಾರ್ಟ್ ಸಿಟಿ ಯೋಜನಾ ನಿರ್ದೇಶಕರು ಮಾತ್ರ ದುಂದು ವೆಚ್ಚ ಆಗಿರುವುದನ್ನು ನಿರಾಕರಿಸಿದ್ದಾರೆ.
ಸ್ಮಾರ್ಟ್ ಸಿಟಿ ಹೆಸರಲ್ಲಿ ಬಂದ ಹಣವನ್ನು ಮಂಗಳೂರಿನಲ್ಲಿ ಅನಗತ್ಯ ಕೆಲಸಗಳಿಗಾಗಿ ವ್ಯಯಿಸಲಾಗುತ್ತಿದೆ. ಪ್ರತಿ ಸ್ಮಾರ್ಟ್ ಸಿಟಿ ಯೋಜನೆಗೂ ಐಎಎಸ್ ದರ್ಜೆಯ ಅಧಿಕಾರಿ ನೇಮಕ ಆಗಬೇಕಿದ್ದರೂ ಮಂಗಳೂರಿಗೆ ಇನ್ನೂ ಅಧಿಕಾರಿಯ ನೇಮಕ ಆಗಿಲ್ಲ. ಹೀಗಾಗಿ ಆನೆ ನಡೆದಿದ್ದೇ ದಾರಿ ಅನ್ನುವಂತೆ ಸ್ಥಳೀಯ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸೇರಿ ಜನರ ತೆರಿಗೆಯ ದುಡ್ಡನ್ನು ಪೋಲು ಮಾಡುತ್ತಿದ್ದಾರೆ. ದುಡ್ಡು ಪೋಲು ಮಾಡುತ್ತ ಸ್ಮಾರ್ಟ್ ಸಿಟಿ ಯೋಜನೆಯ ಮೂಲ ಉದ್ದೇಶಕ್ಕೆ ಮಣ್ಣೆರಚುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.