ಉಡುಪಿ: ‘ಮಂಗಳೂರು ಚಲೋ’ ಬೈಕ್ ರ‍್ಯಾಲಿಗೆ ಉಡುಪಿಯಲ್ಲಿ ಹಿನ್ನಡೆಯಾಗಿದೆ. ಪೂರ್ವಯೋಜಿತ ಕಾರ್ಯಕ್ರಮದಂತೆ ಶಿವಮೊಗ್ಗ, ಹಾವೇರಿ ಭಾಗದ ಕಾರ್ಯಕರ್ತರು ಹೆಬ್ರಿ ಮೂಲಕ ಕಾರ್ಕಳ ತಲುಪಬೇಕಿತ್ತು.
ಹುಬ್ಬಳ್ಳಿ, ಬೆಳಗಾವಿ ಭಾಗದ ಕಾರ್ಯಕರ್ತರು ಬೈಂದೂರು ಮೂಲಕ ಮಣಿಪಾಲಕ್ಕೆ ಬಂದು ತಂಗಬೇಕಿತ್ತು. ಆದರೆ ಆಯಾ ಜಿಲ್ಲೆಗಳಲ್ಲೇ ಕಾರ್ಯಕರ್ತರನ್ನು ಬಂಧಿಸಿದ ಕಾರಣ ಅನ್ಯ ಜಿಲ್ಲೆಯ ಪ್ರತಿಭಟನಾಕಾರರು ಉಡುಪಿ ಜಿಲ್ಲೆಯ ಪ್ರವೇಶ ಮಾಡಿಲ್ಲ. ಇದರ ಹೊರತಾಗಿಯೂ ಕಾರ್ಕಳ ತಾಲೂಕಿನ ಹೆಬ್ರಿಯಲ್ಲಿ ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯ್ತು, ತಾಲೂಕಿನ ಐನೂರಕ್ಕೂ ಅಧಿಕ ಬೈಕ್ ಗಳು ರ‍್ಯಾಲಿಯಲ್ಲಿ ಭಾಗವಹಿಸಿದವು.
Advertisement
ರ‍್ಯಾಲಿ ಪ್ರಾರಂಭವಾಗಿ ಕೆಲ ದೂರ ಸಂಚರಿಸಿದ ನಂತರ ಪೊಲೀಸರು ಅಡ್ಡಿಪಡಿಸಿದರು. ಶಾಸಕ ಸುನಿಲ್ ಕುಮಾರ್ ಸಹಿತ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುವ ಮೂಲಕ ಬೈಕ್ ರ‍್ಯಾಲಿಗೆ ಅವಕಾಶ ನೀಡಿಲ್ಲ. ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಹೆಮ್ಮಾಡಿಯಲ್ಲೂ ರ‍್ಯಾಲಿ ನಡೆಸಲು ಮುಂದಾದ 200 ಕ್ಕೂ ಅಧಿಕ ಉಡುಪಿ ಜಿಲ್ಲೆಯ ಕಾರ್ಯಕರ್ತರನ್ನು ಬಂಧಿಸಲಾಯ್ತು. ಜಿಲ್ಲೆಯಲ್ಲಿ 300 ಕ್ಕೂ ಹೆಚ್ಚು ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.