-ಪೊಲೀಸರ ಮೇಲೆ ಎಫ್‍ಐಆರ್ ದಾಖಲಿಗೆ ಸೂಚನೆ
ಬೆಂಗಳೂರು: ಸಿಎಎ ವಿರೋಧಿಸಿ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆದು ಮಂಗಳೂರಿನಲ್ಲಿ ಗೋಲಿಬಾರ್ ಆಗಿತ್ತು. ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಹಿಂಸಾಚಾರಕ್ಕೆ ಕಾರಣವಾಗಿದ್ದ ಎನ್ನಲಾದ 22 ಆರೋಪಿಗಳನ್ನು ಬಂಧಿಸಿದ್ದ ಪೊಲೀಸರ ಕ್ರಮ ಸರಿಯಲ್ಲ ಅಂತ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳ ಬಂಧನ ಮಾಡುವಾಗ ಪೊಲೀಸರು ಸರಿಯಾದ ಕ್ರಮವನ್ನು ಕೈಗೊಂಡಿಲ್ಲ. ಆರೋಪಿಗಳು ಗಲಭೆಯಲ್ಲಿ ಭಾಗಿಯಾಗಿರೋದಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಒದಗಿಸಿಲ್ಲದೆ ಇರೋ ಅಂಶಗಳನ್ನು ಪರಿಗಣಿಸಿದ ನ್ಯಾಯಾಲಯ ಎಲ್ಲಾ 22 ಆರೋಪಿಗಳಿಗೆ ಜಾಮೀನನ್ನು ಮಂಜೂರು ಮಾಡಿದೆ..
ಸಾಕ್ಷ್ಯ ಎಂದು ಪರಿಗಣಿಸಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ ಅನ್ನೋದಕ್ಕೆ ಸಾಕ್ಷ್ಯ ಇಲ್ಲ ಎಂದು ಏಕ ಸದಸ್ಯ ಪೀಠ ಅಭಿಪ್ರಾಯ ಪಟ್ಟು ಜಾಮೀನನ್ನು ಮಂಜೂರು ಮಾಡಿದೆ.
ಪೊಲೀಸರ ವಿರುದ್ಧ ಎಫ್‍ಐಆರ್: ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಂಗಳೂರು ಪೊಲೀಸರಿಗೆ ದೊಡ್ಡ ಶಾಕ್ ನೀಡಿದೆ. ಮಂಗಳೂರು ಗಲಭೆ ನೆಪದಲ್ಲಿ ಪೊಲೀಸರು ಅಮಾಯಕರ ಮೇಲೆ ಹಲ್ಲೆ ಮಾಡಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ. ಈ ಹಿಂಸೆ ಅನುಭವಿಸಿದವರು ಪೊಲೀಸರ ವಿರುದ್ಧ ದೂರು ನೀಡಿದರೂ ಎಫ್‍ಐಆರ್ ದಾಖಲು ಮಾಡುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಎಫ್‍ಐಆರ್ ದಾಖಲು ಮಾಡಲು ಆದೇಶಿಸಿದೆ.
ನೊಂದವರು ಪೊಲೀಸರ ವಿರುದ್ಧ ದೂರನ್ನು ನೀಡಿದ್ದಾರೆ. 10 ದೂರುಗಳನ್ನು ನೀಡಿ ಪದೇ ಪದೇ ಆ ದೂರಿನ ಬಗ್ಗೆ ವಿಚಾರಣೆ ನಡೆಸಲು ಪೊಲೀಸ್ ಠಾಣೆಗೆ ಮತ್ತು ಮಂಗಳೂರು ಆಯುಕ್ತರ ಭೇಟಿಗೆ ತೆರಳಿದಾಗ ಸರಿಯಾದ ರೀತಿಯಲ್ಲಿ ಉತ್ತರ ನೀಡುತ್ತಾ ಇಲ್ಲ. ಈ ದೂರಿಗೆ ಕ್ರಮವನ್ನು ಪೊಲೀಸರು ಜರಗಿಸುತ್ತಿಲ್ಲ ಅಂತ ವಾದ ಮಾಡಿದ್ದರು. ಇದನ್ನ ಪರಿಶೀಲಿಸಿದ ನ್ಯಾಯಾಲಯ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಗೆ ಸೂಚಿಸಿದೆ.