ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದಲ್ಲಿ ಯುವಕನೊಬ್ಬ ವಿಶೇಷ ವೇಷ ಧರಿಸಿ ಅನಾರೋಗ್ಯ ಪೀಡಿತ 5 ವರ್ಷದ ಪುಟ್ಟ ಮಗುವಿನ ಚಿಕಿತ್ಸೆಗೆ ನೆರವಾಗುತ್ತಿದ್ದಾನೆ.
5 ವರ್ಷದ ನಿಹಾರಿಕಾ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿಕಿತ್ಸೆ ವೆಚ್ಚಕ್ಕೆ 10 ಲಕ್ಷ ರೂಪಾಯಿ ಬೇಕಾಗುತ್ತದೆ. ಆದರೆ ನಿಹಾರಿಕಾಳ ತಂದೆ ತಾಯಿ ಬಡ ಕುಟುಂಬವರಾಗಿದ್ದು, ದಾನಿಗಳ ಸಹಾಯಕ್ಕೆ ಕೈ ಚಾಚಿದ್ದಾರೆ.
ಹೀಗಾಗಿ ಕಟೀಲು ಬ್ರಹ್ಮಕಲಶದ ಪುಣ್ಯ ಸಂದರ್ಭದಲ್ಲಿ ನೇತಾಜಿ ಬ್ರಿಗೇಡ್ ಮೂಡಬಿದಿರೆ ಇಲ್ಲಿನ ತಂಡದ ಸದಸ್ಯರು ಸೇರಿ ಚಿಕಿತ್ಸೆಗೆ ಆರ್ಥಿಕ ಸಹಾಯ ಮಾಡಬೇಕು ಎನ್ನುವ ಉದ್ದೇಶದಿಂದ ತಂಡದ ಸದಸ್ಯ ವಿಕ್ಕಿ ಶೆಟ್ಟಿ ವಿಶೇಷ ವೇಷ ಹಾಕಿಸಿ ಹಣ ಸಂಗ್ರಹ ಮಾಡುತ್ತಿದ್ದಾರೆ. ಬ್ರಹ್ಮಕಲಶೋತ್ಸವಕ್ಕೆ ಬಂದ ಲಕ್ಷಾಂತರ ಭಕ್ತರಲ್ಲಿ ಹೆಚ್ಚಿನವರು ಹಣ ನೀಡಿ ಚಿಕಿತ್ಸೆಗೆ ನೆರವಾಗುತ್ತಿದ್ದಾರೆ.