ಮಂಗಳೂರು: ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಪಕ್ಕದ ಗುಡ್ಡವೊಂದು ಕುಸಿದು ಬಿದ್ದು ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರು ಮಣ್ಣಿನಡಿಯಲ್ಲಿ ಸಿಲುಕಿಕೊಂಡು ಜೀವಂತ ಸಮಾಧಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿರುವ ಪ್ರಸಿದ್ಧ ಕ್ಷೇತ್ರ ಒಡಿಯೂರು ಶ್ರೀ ದತ್ತಾಂಜನೇಯ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿದ್ದ ಕಟ್ಟಡದ ಪಿಲ್ಲರ್‍ಗಾಗಿ ಗುಂಡಿ ತೆಗೆಯಲಾಗಿತ್ತು. ಜೆಸಿಬಿ ಮೂಲಕ ಕೆಳಭಾಗದಿಂದ ಗುಡ್ಡದ ಮಣ್ಣು ತೆಗೆಯುತ್ತಿದ್ದಾಗ ಗುಡ್ಡದ ಒಂದು ಭಾಗ ಕುಸಿದು ಕೆಳಗೆ ಬಿದ್ದಿದ್ದು ಕೆಳ ಭಾಗದಲ್ಲಿ ಕೆಲಸ ನಿರತರಾಗಿದ್ದ ಮೂವರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ. ಮಣ್ಣಿನಡಿಯಲ್ಲಿದ್ದ ಓರ್ವ ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಸುಳ್ಯದ ಅಲಂಗಾರು ನಿವಾಸಿ ಬಾಳಪ್ಪ ನಾಯ್ಕ(56), ಬಂಟ್ವಾಳದ ಮಾಣಿಲ ಗ್ರಾಮದ ನಿವಾಸಿ ಪ್ರಕಾಶ್(42) ಹಾಗೂ ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲು ನಿವಾಸಿ ರಮೇಶ್ (50)ಮೃತಪಟ್ಟ ದುರ್ದೈವಿಗಳು. ಮತ್ತೋರ್ವ ಕಾರ್ಮಿಕ ಮಂಗಳೂರಿನ ಉಳ್ಳಾಲ ಕುತ್ತಾರು ನಿವಾಸಿ ಪ್ರಭಾಕರ್ ಗಂಭೀರ ಗಾಯಗೊಂಡಿದ್ದು, ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಘಟನೆ ನಡೆದಾಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವವರನ್ನು ಮೇಲೆತ್ತುವ ಪ್ರಯತ್ನ ಮಾಡಿದ್ರೂ ಮೂವರು ಆ ವೇಳೆಗೆ ಜೀವಂತ ಸಮಾಧಿಯಾಗಿದ್ದರು. ಘಟನೆಯ ಬಗ್ಗೆ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.