– ವಿಜಯೋತ್ಸವ ಆಚರಿಸಿದ್ದ ಐವರ ಮೇಲೆ ಎಫ್‍ಐಆರ್
ಮಂಗಳೂರು: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಮತ್ತೆ ಕೋಮು ಸಂಘರ್ಷ ಬುಗಿಲೆದ್ದಿದೆ. ಪ್ರಧಾನಿ ಮೋದಿ ಪ್ರಮಾಣವಚನ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದ ವೇಳೆ ಭಾರತ್ ಮಾತಾಕೀ ಜೈ ಎಂದ ಇಬ್ಬರಿಗೆ ಚೂರಿ ಇರಿತವಾಗಿತ್ತು. ಇದೀಗ ಚೂರಿ ಇರಿದಿದ್ದ ಐವರು ಆರೋಪಿಗಳನ್ನು ಕೋಣಾಜೆ ಪೊಲೀಸರು ಬಂಧಿಸಿದ್ದು, ವಿಜಯೋತ್ಸವ ಆಚರಿಸಿದ್ದ ಐವರ ಮೇಲೂ ಎಫ್‍ಐಆರ್ ದಾಖಲಾಗಿದೆ.
ಬಂಧಿತ ಆರೋಪಿಗಳನ್ನು ಶಾಕೀರ್, ಅಬ್ದುಲ್ ರಜಾಕ್, ಅಬೂಬಕ್ಕರ್ ಸಿದ್ದಿಕ್, ಸವಾದ್ ಹಾಗೂ ಹಫೀಝ್ ಎಂದು ಗುರುತಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ಹಿನ್ನಲೆಯಲ್ಲಿ ಇಡೀ ದೇಶದಲ್ಲೇ ಸಂಭ್ರಮ ಕಳೆಗಟ್ಟಿತ್ತು. ಇದೇ ರೀತಿ ಮಂಗಳೂರಿನ ಹೊರವಲಯದ ಉಳ್ಳಾಲ ತಾಲೂಕಿನ ಬೋಳಿಯಾರ್‌ನಲ್ಲಿ (Boliyar) ಬಿಜೆಪಿ (BJP) ಕಾರ್ಯಕರ್ತರು ವಿಜಯೋತ್ಸವದ ನಡೆಸಿದ್ದರು. ಬೋಳಿಯಾರ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದಾಗ ಮಸೀದಿ ಮುಂಭಾಗದಲ್ಲಿ ವಿಜಯೋತ್ಸವದ ಮೆರವಣಿಗೆ ಹೋಗಿತ್ತು. ಈ ವೇಳೆ ಮೂವರು ಬಿಜೆಪಿ ಕಾರ್ಯಕರ್ತರು ಬೈಕ್‍ನಲ್ಲಿ ತೆರಳುತ್ತಾ `ಬೋಲೋ ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದ್ದರು. ತಕ್ಷಣ ಅಲ್ಲಿದ್ದ ಸುಮಾರು 20ರಿಂದ 25 ಯುವಕರು ಬೈಕನ್ನು ಹಿಂಬಾಲಿಸಿಕೊಂಡು ಹೋಗಿ ಜೈಕಾರ ಹಾಕಿದ್ದ ಮೂವರನ್ನು ತಡೆದು ಓರ್ವನಿಗೆ ಹಿಗ್ಗಾಮುಗ್ಗ ಥಳಿಸಿ ಇಬ್ಬರಿಗೆ ಚೂರಿ ಇರಿದಿದ್ದರು. ಕೃಷ್ಣಕುಮಾರ್ ಎಂಬಾತನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ವೇಳೆ ಚೂರಿ ಇರಿತಕ್ಕೊಳಗಾಗಿದ್ದ ಹರೀಶ್ ಹಾಗೂ ನಂದಕುಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಯಾರು?
ಈ ನಡುವೆ ವಿಜಯೋತ್ಸವದ ನಡೆಸಿದ್ದ ಬಿಜೆಪಿ ಕಾರ್ಯಕರ್ತರ ಮೇಲೂ ಕೋಣಾಜೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರು ಮಸೀದಿ ಮುಂದೆ ನಿಂತಿದ್ದವರಿಗೆ ಕೆಟ್ಟ ಶಬ್ದಗಳಿಂದ ನಿಂದಿಸಿ, ಪ್ರಚೋದನಾಕಾರಿ ಘೋಷಣೆ ಕೂಗಿದ್ದಾರೆಂದು ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಪಿ.ಕೆ.ಅಬ್ದುಲ್ ನೀಡಿದ ದೂರಿನ ಅಡಿ, ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ಸುರೇಶ್, ವಿನಯ್, ಸುಭಾಷ್, ರಂಜಿತ್ ಹಾಗೂ ಧನಂಜಯ್ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾನೂನು ಕೈಗೆತ್ತಿಕೊಂಡ ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಳ್ಳಾಲ ಬೀಚ್‍ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆ ಸಮುದ್ರ ಪಾಲು – ಮೂವರ ರಕ್ಷಣೆ