ಬೆಂಗಳೂರು: ರಾಜ್ಯದೆಲ್ಲೆಡೆ ಮುಂಗಾರು ಚುರುಕುಗೊಂಡಿದ್ದು, ಒಂದೆಡೆ ಮಲೆನಾಡು ಸೇರಿದಂತೆ ಹಲವೆಡೆ ಮಳೆರಾಯನ ಅಬ್ಬರ ಜೋರಾಗಿದೆ. ಇನ್ನೊಂದೆಡೆ ಭಾರೀ ಮಳೆಗೆ ಗುಡ್ಡ ಕುಸಿದು ಮಂಗಳೂರು -ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.
ಘಾಟ್ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುಬ್ರಹ್ಮಣ್ಯ- ಸಕಲೇಶಪುರ ಮಾರ್ಗ ಮಧ್ಯೆ ಇರುವ ಸಿರಿಬಾಗಿಲಿನಲ್ಲಿ ರೈಲು ಹಳಿ ಮೇಲೆ ಗುಡ್ಡ ಕುಸಿತಗೊಂಡಿದೆ. ಹಾಗಾಗಿ ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ.
ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಮಳೆಗೆ ಚಿಕ್ಕಮಗಳೂರಿನ ಹೆಬ್ಬಾಳ ಸೇತುವೆ ಮುಳುಗಲಿದೆ. ಕಳಸ ಹೊರನಾಡು ಸಂಪರ್ಕಿಸುವ ಹೆಬ್ಬಾಳ ಸೇತುವೆ ಮುಳುಗಡೆಗೆ ಕೇವಲ ಇನ್ನೊಂದು ಅಡಿ ಬಾಕಿ ಇದೆ. ಮಲೆನಾಡಿನ ಜೀವನದಿಗಳಾದ ತುಂಗಾ-ಭದ್ರಾ, ಹೇಮಾವತಿ ತುಂಬಿ ಹರಿಯುತ್ತಿದೆ. ಕುದುರೆಮುಖ, ಕಳಸ, ಸಂಸೆ, ಬಾಳೆಹೊಳೆ, ಬಸ್ರೀಕಟ್ಟೆ, ತನಿಕೋಡು ವ್ಯಾಪ್ತಿಯಲ್ಲಿ ಹಾಗೂ ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕೊಪ್ಪದಲ್ಲೂ ಭಾರೀ ಮಳೆ ಆಗುತ್ತಿದೆ.
ಇತ್ತ ಧಾರವಾಡದಲ್ಲಿ ಕಳೆದ ಎರಡು ದಿನಗಳಿಂದ ಸತತ ಮಳೆ ಆಗುತ್ತಿದ್ದು, ಮಳೆಯಿಂದಾಗಿ ಶಿಥಿಲಗೊಂಡಿದ್ದ ಸಿದ್ದೇಶ್ವರನಗರದ ಸರ್ಕಾರಿ ಶಾಲೆಯ ಗೋಡೆ ಕುಸಿತಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ವರದಿಯಾಗಿದೆ. ಕೊಡಗಿನಲ್ಲಿ ಕೊಂಚ ಮಳೆರಾಯ ಬಿಡುವು ಕೊಟ್ಟಿದ್ದಾನೆ. ಆದರೆ ಭಾಗಮಂಡಲ ತಲಕಾವೇರಿ ಬಾಗದಲ್ಲಿ ತುಂತುರು ಮಳೆ ಆಗುತ್ತಿದ್ದು, ಮಡಿಕೇರಿಯಲ್ಲಿ ಮೋಡ ಕವಿದ ವಾತಾವರಣವಿದೆ.
ವಾಣಿಜ್ಯನಗರಿ ಮುಂಬೈನಲ್ಲೂ ಮಳೆ ಕೊಂಚ ಬಿಡುವು ಕೊಟ್ಟಿದ್ದು, ಜನಜೀವನ ಸಹಜಸ್ಥಿತಿಯತ್ತ ಬರುತ್ತಿದೆ. ಆದರೂ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಆಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.