– ಹೇಗಿತ್ತು ದರೋಡೆಕೋರರ ಪ್ಲ್ಯಾನ್?
ಮಂಗಳೂರು: ಇಲ್ಲಿನ ಕೆ.ಸಿ.ರೋಡ್ ನಲ್ಲಿರೋ ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. 10 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿರೋ ಡಕಾಯಿತರು 6 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಬಿಟ್ಟು ಕೇರಳ ಗಡಿ ಮೂಲಕ ಪರಾರಿಯಾಗಿದ್ದಾರೆ. ಎಷ್ಟು ಚಿನ್ನಾಭರಣ ಕಳವಾಗಿದೆ ಅನ್ನೋದು ಇನ್ನೂ ಸರಿಯಾಗಿ ಲೆಕ್ಕ ಸಿಕ್ಕಿಲ್ಲ. ಇದಕ್ಕೆಲ್ಲ ಉತ್ತರ ಸಿಗಲು ಪೊಲೀಸರು ಎರಡು ತಂಡಗಳಾಗಿ ದರೋಡೆಕೋರರ ಪತ್ತೆ ಕಾರ್ಯ ಆರಂಭಿಸಿದ್ದಾರೆ.
ಮಂಗಳೂರಿನ ಹೊರವಲಯದ ತಲಪಾಡಿ ಬಳಿಯ ಕೆ.ಸಿ ರೋಡ್‌ನಲ್ಲಿರುವ ಕೋಟೆಕಾರ್ ವ್ಯವಸಾಯ ಸಹಕಾರಿ ಬ್ಯಾಂಕ್ ನಲ್ಲಿ ನಿನ್ನೆ ಹಾಡು ಹಗಲಲ್ಲೇ ನಡೆದ ದರೋಡೆ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಎಂ ಸಿದ್ದರಾಮಯ್ಯನವರು ಮಂಗಳೂರು ಪ್ರವಾಸದಲ್ಲಿ ಇರುವಾಗಲೇ ಈ ದರೋಡೆ ನಡೆದಿದ್ದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಇದನ್ನೂ ಓದಿ: Mangaluru Bank Robbery| ಸಿಸಿ ಕ್ಯಾಮೆರಾ ರಿಪೇರಿಗೆ ನೀಡಿದ ದಿನವೇ ಬ್ಯಾಂಕ್ ಲೂಟಿ
Advertisement
ಹಾಡುಹಗಲಲ್ಲೇ ಮಟ ಮಟ ಮಧ್ಯಾಹ್ನದ 1 ಗಂಟೆಗೆ ಬ್ಯಾಂಕ್‌ಗೆ ಕೇವಲ ಮಾಸ್ಕ್ ಹಾಗೂ ಟೋಪಿ ಹಾಕಿಕೊಂಡು ಮಾಮೂಲಿ ಜನರಂತೆ ನುಗ್ಗಿದ ಐವರು ಡಕಾಯಿತರು ಎತ್ತಿಕೊಂಡು ಬರಲು ಸಾಧ್ಯವಾಗದಷ್ಟು ಭಾರದ ಗೋಣಿ ಚೀಲಪೂರ್ತಿ ಚಿನ್ನಾಭರಣ ಎತ್ತಿಕೊಂಡು ಪರಾರಿಯಾಗಿದ್ದರು. ದಷ್ಟಪುಷ್ಟವಾಗಿದ್ದ ಐವರು ಡಕಾಯಿತರು ಕಾರೊಂದರಲ್ಲಿ ಬಂದಿಳಿದು ಬ್ಯಾಂಕ್ ಗೆ ನುಗ್ಗಿದ್ದರು. ಬ್ಯಾಂಕ್ ನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿಗೆ, ಚಿನ್ನಾಭರಣ ಪರಿವೀಕ್ಷಕ, ಸಿಸಿಟಿವಿ ಕ್ಯಾಮೆರಾ ರಿಪೇರಿ ಮಾಡಲು ಬಂದಿದ್ದ ಟೆಕ್ನಿಶಿಯನ್ ಸೇರಿ ಐದು ಜನರಿಗೂ ಪಿಸ್ತೂಲ್, ಚಾಕು ಮಚ್ಚು ತೋರಿಸಿ ಹಿಂದಿ ಭಾಷೆಯಲ್ಲಿ ನಿಮಗೇನು ಮಾಡಲ್ಲ ಚಿನ್ನಾಭರಣ ದರೋಡೆ ಮಾಡಲು ಬಿಡುವಂತೆ ಹೆದರಿಸಿ ತಮ್ಮ ಕೈಗೆ ಸಿಕ್ಕ ಚಿನ್ನಾಭರಣವನ್ನು, 7 ಲಕ್ಷ ನಗದನ್ನ ದೋಚಿ ಪರಾರಿಯಾಗಿದ್ದಾರೆ. ಡಕಾಯಿತರ ಕೈಯಿಂದ ಜೀವಂತವಾಗಿ ಪಾರಾದ ಮಹಿಳಾ ಸಿಬ್ಬಂದಿ ಆತಂಕದಿಂದ ಹೊರ ಬಂದಿಲ್ಲ.
Advertisement
ಬ್ಯಾಂಕ್ ನೊಳಗೆ ಸುಮಾರು 15 ಕೋಟಿ ಮೌಲ್ಯದ ಚಿನ್ನಾಭರಣಗಳಿದ್ದು ಡಕಾಯಿತರು ಸುಮಾರು 8 ರಿಂದ 10 ಕೋಟಿಯಷ್ಟು ಮೌಲ್ಯದ ಚಿನ್ನಾಭರಣವನ್ನು ಕದ್ದೊಯ್ದಿದ್ದಾರೆ. ಎಷ್ಟು ಕಳವಾಗಿದೆ ಅನ್ನೋ ಸರಿಯಾದ ಮಾಹಿತಿ ಇನ್ನೂ ಸಿಕ್ಕಿಲ್ಲ. ಸುಮಾರು 6 ಕೋಟಿಯಷ್ಟು ಮೌಲ್ಯದ ಚಿನ್ನಾಭರಣ ಎತ್ತಿಕೊಂಡು ಹೋಗಲು ಸಾಧ್ಯವಾಗದಯೋ ಅಥವಾ ಸಮಯ ಸಿಗಲಿಲ್ಲ ಅನ್ನೋ ಕಾರಣಕ್ಕೋ ಅಲ್ಲೇ ಬಿಟ್ಟು ಹೋಗಿದ್ದಾರೆ. ಬ್ಯಾಂಕ್ ಒಳಗಿಂದ ಹೊರ ಬಂದ ಐವರಲ್ಲಿ ಓರ್ವ ಕಾರು ರೆಡಿ ಮಾಡಿದ್ದು, ಬಳಿಕ ಇಬ್ಬರು ಚಿನ್ನಾಭರಣದ ಮೂಟೆಯನ್ನು ಹಿಡಿದುಕೊಂಡು ಕಾರಿನತ್ತ ಬಂದಿದ್ದು ಬಳಿಕ ಮತ್ತಿಬ್ಬರು ಓಡಿ ಬಂದು ಕಾರು ಹತ್ತಿ ಪರಾರಿಯಾಗಿದ್ದಾರೆ. ಈ ವೇಳೆ ಸಿಬ್ಬಂದಿ ಕಿರುಚಾಡಿದ್ದು ಎದುರು ಮನೆಯಲ್ಲಿದ್ದ ಉಷಾ ಎನ್ನುವ ವೃದ್ಧೆ ಡಕಾಯಿತರ ಕರಾಮತ್ತನ್ನು ಕಣ್ಣಾರೆ ನೋಡಿದ್ದಾರೆ. ತನ್ನ ಮಗನಿಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಲು ಮಾಹಿತಿ ನೀಡಿದ್ದರು. ದರೋಡೆಕೋರರ ಕೃತ್ಯದ ಬಗ್ಗೆ ವೃದ್ಧೆ ಆತಂಕದಲ್ಲೇ ʻಪಬ್ಲಿಕ್ ಟಿವಿʼಗೆ ಪ್ರತಿಕ್ರಿಯಿಸಿದ್ದಾರೆ.
Advertisement
ಕಾರು ಹತ್ತಿ ಪರಾರಿಯಾದ ದರೋಡೆಕೋರರು ಘಟನಾ ಸ್ಥಳದ ಪಕ್ಕದಲ್ಲೇ ಇದ್ದ ಕೇರಳ ಗಡಿ ತಲಪಾಡಿಯತ್ತ ತೆರಳಿದ್ದಾರೆ. ಕಾರಿಗೆ ಬೆಂಗಳೂರು ಪಾರ್ಕಿಂಗ್ ನಂಬರ್ KM4 AQ-9923 ಫೇಕ್ ನಂಬರ್ ಪ್ಲೇಟ್ ಹಾಕಿದ್ದು, ತಲಪಾಡಿ ಟೋಲ್ ಗೇಟ್ ನಲ್ಲಿ ಫಾಸ್ಟ್ ಟ್ಯಾಗ್ ವರ್ಕ್ ರ‍್ಕಾಗದೆ 150 ರೂ. ಹಣ ನೀಡಿ ರಶೀದಿ ಪಡೆದು ಪರಾರಿಯಾಗಿದ್ದಾರೆ. ಈ ಟೋಲ್ ಗೇಟ್ ನ ಸಿ.ಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಪೊಲೀಸರ ಎರಡು ತಂಡ ಕಾಸರಗೋಡು, ಕೇರಳದತ್ತ ತೆರಳಿದೆ. ಒಟ್ಟಿನಲ್ಲಿ ಆದಷ್ಟು ಬೇಗ ದರೋಡೆಕೋರರ ಬಂಧನವಾಗಲಿ ಎಂದು ಬ್ಯಾಂಕ್‌ನ ಗ್ರಾಹಕರು ಸೇರಿದಂತೆ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ: ಸಿಎಂ ಮಂಗ್ಳೂರಿನಲ್ಲಿ ಇರುವಾಗಲೇ ಬ್ಯಾಂಕ್ ಲೂಟಿ – ಬಂದೂಕು ತೋರಿಸಿ ದರೋಡೆ