ಮಂಗಳೂರು: ಬಜ್ಪೆಯ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಯಲ್ಲಿ ಫಾಝಿಲ್‌ನ ಸಹೋದರ ಆದಿಲ್ ಮೆಹರೂಫ್‌ನೆ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ. ಇನ್ನೂ ಹತ್ಯೆ ವೇಳೆ ಕಾಣಿಸಿಕೊಂಡಿದ್ದ ಬುರ್ಖಾಧಾರಿ ಮಹಿಳೆಯರ ಬಗ್ಗೆ ಮಂಗಳೂರು (Mangaluru) ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿದ ಅವರು, ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದವರನ್ನು ಅಬ್ದುಲ್ ಸಫ್ವಾನ್, ನಿಯಾಝ್, ಮಹಮ್ಮದ್ ಮುಸಮ್ಮೀರ್, ಕಲಂದರ್ ಶಾಫಿ, ಆದಿಲ್ ಮೆಹರೂಫ್, ರಂಜಿತ್, ಮಹಮ್ಮದ್ ರಿಝ್ವಾನ್ ಹಾಗೂ ನಾಗರಾಜ್ ಎಂದು ಗುರುತಿಸಲಾಗಿದೆ. ಹತ್ಯೆಯಲ್ಲಿ 10 ಜನ ಭಾಗಿಯಾಗಿದ್ದಾರೆ, ಇನ್ನೂ ಇಬ್ಬರ ಬಂಧನ ಬಾಕಿ ಇದೆ. ಈ ಪ್ರಕರಣವನ್ನು ರಿವೇಂಜ್ ಎಂದು ಹೇಳೊಕೆ ಈಗ ಆಗಲ್ಲ. ಸಫ್ವಾನ್‌ಗೂ ಸುಹಾಸ್‌ನಿಂದ ಕೊಲೆಯಾಗುವ ಆತಂಕ ಇತ್ತು. ಹಾಗಾಗಿ ಆದಿಲ್ ಸಂಪರ್ಕ ಪಡೆದು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಸಫ್ವಾನ್ ಗ್ಯಾಂಗ್‌ನ ಇಬ್ಬರು ಆರೋಪಿಗಳು ಅರೆಸ್ಟ್
ಸುಹಾಸ್ ಶೆಟ್ಟಿ ಕೊಲೆಗೆ ಬುರ್ಖಾಧಾರಿ ಮಹಿಳೆಯರು ಸಾಥ್ ನೀಡಿರೋ ವೀಡಿಯೋ ವೈರಲ್ ಆಗಿದೆ. ಆ ಇಬ್ಬರು ಮಹಿಳೆ ಕೊಲೆ ಆರೋಪಿ ನಿಯಾಜ್‌ನ ಸಂಬಂಧಿಕರು ಎಂದು ತಿಳಿದು ಬಂದಿದೆ. ಯಾವುದೋ ಕೆಲಸಕ್ಕೆ ಆ ಹೆಂಗಸು ಅಲ್ಲಿಗೆ ಬಂದಿರೋದಾಗಿ ಹೇಳಿಕೊಂಡಿದ್ದಾಳೆ. ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದೇವೆ. ಕೊಲೆ ಆರೋಪಿಗಳು ಪಿಎಫ್‌ಐ ಕಾರ್ಯಕರ್ತರು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅವರ ಸೋಷಿಯಲ್ ಮೀಡಿಯಾ ತಪಾಸಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಆರು ಜನ ಸೇರಿ ಸುಹಾಸ್ ಶೆಟ್ಟಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ಸಫ್ವಾನ್ ಮೇಲೆ 2023ರಲ್ಲಿ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಪ್ರಶಾಂತ್ ಹಾಗೂ ಧನರಾಜ್ ಹಲ್ಲೆ ಮಾಡಿದ್ದರು. ಈ ಇಬ್ಬರು ಸುಹಾಸ್ ಶೆಟ್ಟಿ ಸ್ನೇಹಿತರು, ಇದೇ ಕಾರಣಕ್ಕೆ ಆತನಿಗೆ ಕೊಲೆ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಸುಹಾಸ್‌ನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದ. ಇದೇ ವೇಳೆ ಹತ್ಯೆಯಾಗಿದ್ದ ಫಾಝೀಲ್ ತಮ್ಮನನ್ನು ಸಂಪರ್ಕಿಸಿ ಸುಹಾಸ್ ಕೊಲೆ ಮಾಡೋಕೆ ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.
ಸುಹಾಸ್ ಹತ್ಯೆಗೆ 5 ಲಕ್ಷ ರೂ. ನೀಡೋದಾಗಿ ಫಾಜಿಲ್‍ನ ತಮ್ಮ ಆದಿಲ್ ಸಫ್ವಾನ್ ತಂಡಕ್ಕೆ ಹೇಳಿರುತ್ತಾನೆ. ಅದರಲ್ಲಿ 3 ಲಕ್ಷ ರೂ. ಅಡ್ವಾನ್ಸ್ ನೀಡಿರುತ್ತಾನೆ. ಬಳಿಕ ಒಂದು ತಂಡವನ್ನು ಹತ್ಯೆಗಾಗಿ ಸಫ್ವಾನ್ ರೆಡಿ ಮಾಡ್ತಾನೆ. ನಿಯಾಜ್‌ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿತ್‌ನನ್ನು ಸಂಪರ್ಕಿಸಿ, ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ಇದ್ದು, ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಪ್ರಕರಣ – 8 ಆರೋಪಿಗಳ ಬಂಧನ