– ಕೇಂದ್ರಕ್ಕೆ ವರದಿ ಸಲ್ಲಿಸಿದ ತನಿಖಾ ತಂಡ
– ಸ್ಥಳ ಮಹಜರು ವೇಳೆ ಸತ್ಯ ಬಾಯ್ಬಿಟ್ಟ ಆದಿತ್ಯ
ಮಂಗಳೂರು: ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿತವಾಗಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಆದಿತ್ಯ ರಾವ್ ಬಗ್ಗೆ ಕೇಂದ್ರಕ್ಕೆ ವರದಿ ರವಾನೆಯಾಗಿದೆ. ಪೊಲೀಸರ ಪ್ರಾಥಮಿಕ ವರದಿಯನ್ನು ಕೇಂದ್ರ ಗೃಹ ಇಲಾಖೆ ಪರಿಶೀಲಿಸಲಿದ್ದು, ಎನ್‍ಐಎ ತನಿಖೆ ಅಗತ್ಯವಿದೆಯೇ ಅನ್ನುವ ಬಗ್ಗೆ ನಿರ್ಧರಿಸಲಿದೆ.
Advertisement
Advertisement
ಬಾಂಬರ್ ಆದಿತ್ಯನನ್ನು ಪೊಲೀಸರು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಆರೋಪಿ ಆದಿತ್ಯನನ್ನು ವಿಚಾರಣೆ ನಡೆಸಿದ ಪೊಲೀಸರು, ಸಮಗ್ರ ವರದಿಯನ್ನು ರೆಡಿ ಮಾಡಿದ್ದರು. ಬಾಂಬ್ ತಯಾರಿಕೆ, ಅದಕ್ಕೆ ಬಳಸಿದ ವಸ್ತುಗಳು, ಏರ್ ಪೋರ್ಟ್ ಅಧಿಕಾರಿಗಳು ಟಾರ್ಗೆಟ್ ಆಗಿರುವುದು ಇತ್ಯಾದಿ ವಿಚಾರಗಳ ಬಗ್ಗೆ ಆರೋಪಿ ನೀಡಿದ್ದ ಮಾಹಿತಿಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇಡೀ ಪ್ರಕರಣದ ಕುರಿತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಚೆನ್ನೈನಿಂದ ರಾಸಾಯನಿಕ ತರಿಸಿದ್ದ ಬಾಂಬರ್- ಸ್ಫೋಟಕ ವಿಚಾರ ಬಾಯ್ಬಿಟ್ಟ ಆದಿತ್ಯ
Advertisement
ತನಿಖಾಧಿಕಾರಿ ಮಂಗಳೂರು ಉತ್ತರ ಎಸಿಪಿ ಕೆ.ಯು ಬೆಳ್ಳಿಯಪ್ಪ ರೆಡಿ ಮಾಡಿದ್ದ ವಿಚಾರಣಾ ವರದಿ ರಾಜ್ಯ ಗೃಹ ಇಲಾಖೆಗೆ ಸಲ್ಲಿಕೆಯಾಗಿದ್ದು ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ರವಾನೆಯಾಗಿದೆ. ಆರೋಪಿ ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ತನಿಖೆ ಅಗತ್ಯವಿದ್ದರೆ ವಿಚಾರಣೆಗೆ ಪ್ರತ್ಯೇಕ ತಂಡವನ್ನು ಕಳಿಸಿಕೊಡುವ ಸಾಧ್ಯತೆಯಿದೆ.
Advertisement
ಅಗತ್ಯ ಕಂಡು ಬಂದಲ್ಲಿ ಭಯೋತ್ಪಾದಕ ಕೃತ್ಯಗಳ ಬಗ್ಗೆ ತನಿಖೆ ನಡೆಸುವ ರಾಷ್ಟ್ರೀಯ ತನಿಖಾ ದಳ ಆರೋಪಿಯನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಮಂಗಳೂರು ಪೊಲೀಸರು ನೀಡಿರುವ ರಿಪೋರ್ಟ್ ಮಹತ್ವದ್ದಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೆಗೆದುಕೊಳ್ಳುವ ನಿರ್ಣಯದ ಮೇಲೆ ಪ್ರಕರಣ ಯಾವ ರೀತಿಯ ತಿರುವು ಪಡೆಯುತ್ತೆ ಅನ್ನೋದು ನಿರ್ಧಾರವಾಗಲಿದೆ. ಇದನ್ನೂ ಓದಿ: ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು
ಭಯೋತ್ಪಾದಕರಿಗೆ ಬಳಸುವಂತಹ ಕಠಿಣ ಕಾನೂನುಗಳನ್ನು ಪೊಲೀಸರು ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡಗಳು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಂಡೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಜೀವಂತ ಬಾಂಬ್ ಪತ್ತೆ ವಿಚಾರ ಇಡೀ ದೇಶದ ಗಮನ ಸೆಳೆದ ಪ್ರಕರಣವಾಗಿದ್ದು ಸಹಜವಾಗೇ ಆದಿತ್ಯ ರಾವ್ ಹೈಪ್ರೊಫೈಲ್ ಆರೋಪಿಯಾಗಿ ಬದಲಾಗಿದ್ದಾನೆ.
ಆರೋಪಿ ಉತ್ತರದಿಂದ ಅಚ್ಚರಿಗೊಂಡ ಪೊಲೀಸರು:
ಪೊಲೀಸರು ಸ್ಥಳ ಮಹಜರು ನಡೆಸಿದ ವೇಳೆ ತೀರಾ ಸಹಜವಾಗಿ ಆರೋಪಿ ಉತ್ತರ ನೀಡುತ್ತಿದ್ದುದು ಪೊಲೀಸರನ್ನೇ ಅಚ್ಚರಿಗೊಳಿಸಿತ್ತು. ಬಾಂಬ್ ಇದ್ದ ಬ್ಯಾಗ್ ಇಟ್ಟಿದ್ದ ಟಿಕೆಟ್ ಕೌಂಟರ್ ಬಳಿಯ ಕುರ್ಚಿಯನ್ನು ತೋರಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾನೆ. ಪೊಲೀಸರ ಜೊತೆ ತುಳುವಿನಲ್ಲಿಯೇ ಸಂಭಾಷಣೆ ನಡೆಸುತ್ತಾ ಆಟೋ ಇಳಿದು ಎಸ್ಕಲೇಟರ್ ಮೂಲಕ ಮೇಲಿಂದ ಹತ್ತಿ ಬಂದಿದ್ದನ್ನು ತೋರಿಸಿದ್ದಾನೆ. ಮುಖಕ್ಕೆ ಮಾಸ್ಕ್ ಹಾಕಿದ್ದರೂ, ಯಾವುದನ್ನೂ ಆಲಕ್ಷಿಸದೆ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಿದ್ದನು. ಬಳಿಕ ಏರ್ ಪೋರ್ಟ್ ಬಳಿಯಿಂದ ಆಟೋ ಮೂಲಕ ಕೆಂಜಾರು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿನ ಸೆಲೂನ್ ಬಳಿಯಿದ್ದ ಬ್ಯಾಗ್ ತೆಗೆದುಕೊಂಡಿದ್ದನ್ನೂ ಉಲ್ಲೇಖಿಸಿದ್ದಾನೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್
ಪೊಲೀಸರು ಈಗಾಗಲೇ ಆರೋಪಿಯನ್ನು ಹತ್ತು ದಿನಗಳ ಕಸ್ಟಡಿಗೆ ಪಡೆದಿದ್ದು ತನಿಖೆಯನ್ನು ಚೆನ್ನೈಗೆ ವಿಸ್ತರಿಸಲಿದ್ದಾರೆ. ಚೆನ್ನೈನಿಂದ ಬಾಂಬ್ ತಯಾರಿಕೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿದ್ದು, ಆ ಬಗ್ಗೆ ಪೊಲೀಸರು ಅಲ್ಲಿಗೆ ಕೊಂಡೊಯ್ದು ವಿಚಾರಣೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಆದಿತ್ಯ ರಾವ್ ಸಂಪೂರ್ಣ ಜಾತಕ ಈಗ ಪೊಲೀಸರ ಕೈಸೇರಿದ್ದು, ಇನ್ನು ಯಾವ ರೀತಿಯ ತನಿಖೆಗೆ ಒಳಪಡಲಿದ್ದಾನೆ ಅನ್ನೋದು ಕುತೂಹಲ ಅಷ್ಟೇ. ಇದನ್ನೂ ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ