ಮಂಗಳೂರು: ತನ್ನ ಮೈದುನ ಲೈಂಗಿಕ ಕಿರುಕುಳ ನೀಡುತ್ತಿದ್ದು, ಕೊಲೆಗೂ ಸಂಚು ನಡೆಸುತ್ತಿದ್ದಾನೆಂದು ದೂರು ಕೊಟ್ಟರೂ ಪೊಲೀಸರು ನಿರ್ಲಕ್ಷ್ಯಿಸಿದ್ದು, ಮಹಿಳೆ ಆ್ಯಸಿಡ್ ದಾಳಿಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ಲಕ್ಷ್ಯ ಮಾಡಿದ್ದ ಎಎಸ್‍ಐ ಅಮಾನತುಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಇತ್ತೀಚೆಗೆ ಕಡಬದ ವಿದವೆ ಅತ್ತಿಗೆಗೆ ಮೈದುನ ಜಯಾನಂದ ಆ್ಯಸಿಡ್ ಎರಚಿದ್ದು, ಮಹಿಳೆಯ ಮುಖ ಹಾಗೂ ಪುಟ್ಟ ಹೆಣ್ಣು ಮಗುವಿನ ಕೈಕಾಲು ಸುಟ್ಟು ಹೋಗಿತ್ತು. ಇಬ್ಬರೂ ಮಂಗಳೂರಿನ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಜಯಾನಂದ ಜೈಲು ಪಾಲಾಗಿದ್ದು, ಕಡಬ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Advertisement
Advertisement
ತನಿಖೆ ವೇಳೆ ಈ ಆ್ಯಸಿಡ್ ದಾಳಿಗೆ ಪೊಲೀಸರ ನಿರ್ಲಕ್ಷ್ಯವೂ ಕಾರಣ ಎಂಬುದು ಬೆಳಕಿಗೆ ಬಂದಿದೆ. ಆ್ಯಸಿಡ್ ದಾಳಿಗೊಳಗಾದ ಮಹಿಳೆ ಈ ಹಿಂದೆ ಕಡಬ ಪೊಲೀಸರಿಗೆ ಮೈದುನ ಜಯಾನಂದನ ವಿರುದ್ಧ ದೂರು ನೀಡಿದ್ದರು. ತನ್ನ ಗಂಡ ಮೃತಪಟ್ಟ ಬಳಿಕ ಮೈದುನ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದು, ಸಹಕರಿಸದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕುತ್ತಿದ್ದ ಎಂದು ದೂರು ನೀಡಿದ್ದರು.
Advertisement
ಆದರೆ ಕಡಬ ಠಾಣೆಯ ಎಎಸ್‍ಐ ಚಂದ್ರಶೇಖರ್ ನಿರ್ಲಕ್ಷ್ಯ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ದೂರನ್ನು ದಾಖಲಿಸಿಕೊಳ್ಳದೆ ಮಹಿಳೆಯನ್ನು ನಿಂದಿಸಿ ಕಳಿಸಿದ್ದರು. ಈ ವಿಚಾರ ಇದೀಗ ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಎಎಸ್‍ಐ ಚಂದ್ರಶೇಖರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.