– ಪಬ್ಲಿಕ್ ಟಿವಿ ವರದಿಗೆ ಕೊನೆಗೂ ಸ್ಪಂದನೆ
ಮಂಗಳೂರು: ದೇವಸ್ಥಾನದಿಂದ ದಲಿತ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಹೊರ ಹಾಕಿದ ಪ್ರಕರಣದ ವರದಿಯನ್ನು ಸರ್ಕಾರ ಕೇಳಿದೆ. ಈ ಮೂಲಕ ಪಬ್ಲಿಕ್ ಟಿವಿಯ ವರದಿಗೆ ಫಲಶೃತಿ ಸಿಕ್ಕಿದ್ದು, ನೊಂದ ಮಹಿಳಾ ಸಿಬ್ಬಂದಿಗೆ ನ್ಯಾಯ ಸಿಗುವ ಸೂಚನೆ ದೊರೆತಿದೆ.
ಕಳೆದ ಸೋಮವಾರದಂದು ಮೂಡಬಿದ್ರೆ ತಾಲೂಕಿನ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಷಷ್ಠಿ ಮಹೋತ್ಸವದ ದಿನ ದಲಿತ ಮಹಿಳೆಗೆ ಅವಮಾನಿಸಲಾಗಿತ್ತು. ಷಷ್ಠಿ ಮಹೋತ್ಸವದ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಸಾವಿರಾರು ಭಕ್ತರು ಬರುವ ಹಿನ್ನಲೆಯಲ್ಲಿ ಪೊಲೀಸರು ಭದ್ರತೆ ಕಲ್ಪಿಸಿದ್ದರು, ಈ ವೇಳೆ ಮೂಡಬಿದ್ರೆ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಕ್ಷೇತ್ರ ಒಳ ಪ್ರಾಂಗಣದಲ್ಲಿ ಕರ್ತವ್ಯ ನಿರತರಾಗಿದ್ದರು.
Advertisement
Advertisement
ಆದರೆ ಅವರು ದಲಿತ ಮಹಿಳೆ ಎಂದು ತಿಳಿದ ಕ್ಷೇತ್ರದ ಅರ್ಚಕ ವೃಂದ ಆ ಮಹಿಳೆಯನ್ನು ನೀನು ಇಲ್ಲಿ ಡ್ಯೂಟಿ ಮಾಡಬೇಡ ಹೊರಗೆ ಹೋಗು ಎಂದು ಕಳಿಸಿದ್ದು, ಬಳಿಕ ಆಕೆ ಊಟಕ್ಕೆ ಬಂದಾಗಲೂ ಸಹ ಪಂಕ್ತಿ ಭೋಜನಕ್ಕೆ ಅವಕಾಶ ನೀಡದೆ ಪಂಕ್ತಿಯಿಂದಲೂ ಅರ್ಚಕ ವೃಂದ ಎಬ್ಬಿಸಿದ್ದರು. ಇದನ್ನು ಸ್ಥಳೀಯ ಭಕ್ತರು ವಿರೋಧಿಸಿದ್ದು, ಅವಮಾನವಾದ ಎಲ್ಲಾ ಪೊಲೀಸರು ಕ್ಷೇತ್ರದ ಭೋಜನ ಸ್ವೀಕರಿಸದೆ ಹೋಟೆಲ್ ನಲ್ಲಿ ಊಟ ಮಾಡಿದ್ದರು.
Advertisement
ಈ ಕುರಿತು ನಿಮ್ಮ ಪಬ್ಲಿಕ್ ಟಿವಿ ಮೊದಲು ಸುದ್ದಿ ಪ್ರಸಾರ ಮಾಡಿತ್ತು. ಈ ವರದಿಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು ಸಾಕಷ್ಟು ಚರ್ಚೆಯೂ ಆಗಿತ್ತು. ಬಳಿಕ ಈ ವಿಚಾರ ಮುಜರಾಯಿ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿಯವರ ಗಮನಕ್ಕೆ ಬಂದು ತಕ್ಷಣ ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.
Advertisement
ಇಂದು ಮುಜರಾಯಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಕಡಂದಲೆ ದೇವಸ್ಥಾನಕ್ಕೆ ಭೇಟಿ ನೀಡಿ ಅರ್ಚಕ ವೃಂದ ಹಾಗೂ ಆಡಳಿತ ಮಂಡಳಿಯಲ್ಲಿ ಮಾಹಿತಿ ಕಲೆ ಹಾಕಿದೆ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಸ್ಥಾನದಲ್ಲಿ ಬಹಳ ವರ್ಷಗಳಿಂದಲೂ ನೀಚ ಪದ್ದತಿಗಳಿದ್ದು, ಇಂದಿಗೂ ಪಂಕ್ತಿಬೇದ ಇದೆ ಎನ್ನುವುದು ಅಧಿಕಾರಿಗಳಿಗೆ ಇಂದು ಖಚಿತಗೊಂಡಿದೆ. ಜೊತೆಗೆ ಈ ದೇವಸ್ಥಾನದಲ್ಲಿ ಎಷ್ಟು ಅರ್ಚಕರಿದ್ದಾರೆ, ಯಾವ ಯಾವ ಅರ್ಚಕರು ಏನು ಕೆಲಸ ಮಾಡುತ್ತಿದ್ದಾರೆ ಅನ್ನುವ ಮಾಹಿತಿಯೇ ಸರಿಯಾಗಿ ತನಿಖಾ ತಂಡಕ್ಕೆ ಸಿಕ್ಕಿಲ್ಲ.
ಇದರ ಜೊತೆಗೆ ಘಟನೆಯ ಬಗ್ಗೆಯೂ ಸಾಕಷ್ಟು ಮಾಹಿತಿ ಕಲೆ ಹಾಕಿರುವ ತನಿಖಾ ತಂಡ ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದೆ. ಈ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆದು ಸರ್ಕಾರಕ್ಕೆ ವರದಿ ಸಲ್ಲಿಕೆಯಾದರೆ ಈ ದೇವಸ್ಥಾನದಲ್ಲಿದ್ದ ಅನಿಷ್ಟ ಪದ್ದತಿಗಳೆಲ್ಲ ಕೊನೆಗೊಳ್ಳಬಹುದು ಎನ್ನುವುದು ಸ್ಥಳೀಯ ಹಿರಿಯರೊಬ್ಬರ ಮಾತು.