ಮಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಅಪರಿಚಿತ ಮಹಿಳೆಯ ಕೊಲೆಗೈದು ದೇಹವನ್ನು ತುಂಡರಿಸಿ ನಗರದ ಎರಡು ಕಡೆ ಎಸೆದು ಹೋಗಲಾಗಿತ್ತು.
ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕದ್ರಿ ಪಾರ್ಕ್ ಬಳಿ ಎಸೆದು ಹೋಗಿದ್ದ ಗೋಣಿಚೀಲದಲ್ಲಿ ಮಹಿಳೆಯ ರುಂಡ ಪತ್ತೆಯಾಗಿದ್ದರೆ, ಮಂಗಳಾದೇವಿಯ ನಂದಿಗುಡ್ಡದ ಬಳಿ ಸಿಕ್ಕಿದ ಗೋಣಿಚೀಲದಲ್ಲಿ ಶವದ ನಗ್ನ ದೇಹದ ಭಾಗಗಳಿದ್ದವು.
ಕೂಡಲೇ ತನಿಖೆ ನಡೆಸಿದ ಮಂಗಳೂರಿನ ಪೊಲೀಸರು ಶವವಾಗಿ ಪತ್ತೆಯಾದ ವ್ಯಕ್ತಿ ಮಂಗಳಾದೇವಿ ಬಳಿಯ ಮಂಕಿಸ್ಟಾಂಡ್ ನಿವಾಸಿ ಶ್ರೀಮತಿ ಶೆಟ್ಟಿಯ ಶವ ಎಂದು ಗುರುತಿಸಿದ್ದಾರೆ. 37 ವರ್ಷದ ಶ್ರೀಮತಿ ಶೆಟ್ಟಿ ಗಂಡನಿಂದ ವಿಚ್ಛೇದನ ಪಡೆದಿದ್ದು ಮನೆಯಲ್ಲಿ ತಂದೆಯ ತಂಗಿಯ ಜೊತೆ ವಾಸವಿದ್ದರು.
ನಗರದ ಅತ್ತಾವರದಲ್ಲಿ ಸ್ವಂತ ಇಲೆಕ್ಟ್ರಿಕಲ್ ಶಾಪ್ ಹೊಂದಿದ್ದ ಶ್ರೀಮತಿಯ ಶೆಟ್ಟಿಯ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಮಾಜಿ ಪತಿ ಸುದೀಪ್ ಕಳ್ಳತನ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದು ಮಂಗಳೂರಿನ ಜೈಲಿನಲ್ಲಿದ್ದಾನೆ. ಇದೀಗ ಪ್ರಕರಣದ ತನಿಖೆಗೆ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತನಿಖೆಯ ನೇತೃತ್ವ ವಹಿಸಿದ್ದಾರೆ.
ಈ ಕೊಲೆಗೆ ವೈಯಕ್ತಿಕ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಆದರೆ ಇಷ್ಟೊಂದು ಭೀಕರವಾಗಿ ಹತ್ಯೆ ಮಾಡಿ ದೇಹವನ್ನು ಬಿಸಾಡಿದ್ದಾರೆ ಎಂದರೆ ಏನೋ ಗಂಭೀರ ವಿಚಾರ ಇರುವ ಸಾಧ್ಯತೆಯಿದೆ.