– ಅಮಾಯಕರಿಗೂ ನೋಟಿಸ್ ಕಿರಿಕಿರಿ
ಮಂಗಳೂರು: ಮಂಗಳೂರಿನ ಗಲಭೆ, ಗೋಲಿಬಾರ್ ಘಟನೆಗೂ ಕೇರಳಕ್ಕೂ ಡೈರೆಕ್ಟ್ ಲಿಂಕ್ ಇದೆಯಾ ಅನ್ನೋ ಅನುಮಾನ ಕೇಳಿಬಂದಿತ್ತು. ಕೆಲವರಂತೂ, ಈ ಘಟನೆ ಹಿಂದೆ ಕೇರಳದ ಜಿಹಾದಿಗಳು ಭಾಗಿಯಾಗಿದ್ದಾರೆ. ಇದು ಪೂರ್ವ ನಿಯೋಜಿತ ಕೃತ್ಯ ಅಂತಲೇ ಆರೋಪಿಸಿದ್ದರು.
ಇದೀಗ ಹಿಂಸಾಚಾರ ಘಟನೆಯ ಬೆನ್ನು ಬಿದ್ದಿರುವ ಪೊಲೀಸರು ಕೃತ್ಯದಲ್ಲಿ ಕೇರಳದ ಲಿಂಕ್ ಇರುವುದನ್ನು ಪತ್ತೆ ಮಾಡಲು ಹೊಸ ಉಪಾಯ ಹೂಡಿದ್ದಾರೆ. ಡಿಸೆಂಬರ್ 19ರಂದು ನಡೆದ ಮಂಗಳೂರಿನ ಹಿಂಸಾಚಾರ ಮತ್ತು ಗೋಲಿಬಾರ್ ಘಟನೆಯಾಗಿ ಒಂದು ತಿಂಗಳು ಕಳೆದಿದೆ. ಹಿಂಸಾಚಾರ ಕೃತ್ಯದಲ್ಲಿ ಭಾಗಿಯಾದವರ ಪತ್ತೆಗೆ ಪೊಲೀಸರು ವಿಡಿಯೋ ಫೂಟೇಜ್ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
Advertisement
Advertisement
ಆದರೆ ವಿಡಿಯೋದಲ್ಲಿ ಸಾವಿರಾರು ಮಂದಿ ಇರುವುದರಿಂದ ಅವರನ್ನು ಪತ್ತೆ ಮಾಡುವುದು ಸುಲಭದ ಕಾರ್ಯವಲ್ಲ. ಹೀಗಾಗಿ ಅಂದು ಘಟನೆ ನಡೆದ ಬಂದರು ಠಾಣೆ ಪರಿಸರಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಮಂದಿಯನ್ನು ಪೊಲೀಸರು ಪಟ್ಟಿ ಮಾಡಿದ್ದಾರೆ. ಮೊಬೈಲ್ ಟವರ್ ಲೊಕೇಶನ್ ಆಧರಿಸಿ, ಹೊರಜಿಲ್ಲೆ ಮತ್ತು ಕೇರಳ ಮೂಲದ ನಿವಾಸಿಗಳನ್ನು ಪಟ್ಟಿ ಮಾಡಿದ್ದು ಸಾವಿರಕ್ಕೂ ಹೆಚ್ಚು ಮಂದಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
Advertisement
ಹಿಂಸಾಚಾರ ಘಟನೆಯ ಬಳಿಕ ಬಂದರು ಠಾಣೆಯಲ್ಲಿ ದೊಂಬಿ, ಪೊಲೀಸರ ಕೊಲೆಯತ್ನ, ಗಲಭೆ, ಕಲ್ಲು ತೂರಾಟ ಸೇರಿ ಗಂಭೀರ ಅಪರಾಧ ಕೃತ್ಯಗಳ ಬಗ್ಗೆ ವಿವಿಧ ಐಪಿಸಿ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿತ್ತು. ಇದೇ ಆಧಾರದಲ್ಲಿ ಆವತ್ತು ಬಂದರು ಠಾಣೆ ವ್ಯಾಪ್ತಿಗೆ ಆಗಮಿಸಿದ್ದ ಪ್ರಮುಖವಾಗಿ ಕೇರಳದ ನಿವಾಸಿಗಳಿಗೆ ಈಗ ನೋಟಿಸ್ ಜಾರಿಯಾಗಿದೆ. ನಿಗದಿಗೊಳಿಸಿದ ದಿನಾಂಕಗಳಂದು ನೋಟಿಸ್ ಪಡೆದವರು ತನಿಖಾಧಿಕಾರಿಯ ಮುಂದೆ ಹಾಜರಾಗಬೇಕಿದೆ. ಪೊಲೀಸರ ಈ ಕ್ರಮದಿಂದಾಗಿ ಸಾವಿರಾರು ಮಂದಿ ಈಗ ಪೊಲೀಸರ ತನಿಖೆ ಎದುರಿಸುವಂತಾಗಿದೆ.
Advertisement
ಮಂಗಳೂರು ಗಲಭೆಯಲ್ಲಿ ಆಗಿದ್ದೇನು
ಡಿ.19ರಂದು 144 ಸೆಕ್ಷನ್ ಉಲ್ಲಂಘಿಸಿ, ಪ್ರತಿಭಟನೆಗೆ ಯತ್ನಿಸಲಾಗಿತ್ತು. ಮುಸ್ಲಿಂ ಯುವಕರ ಗುಂಪು ಸೇರಿ ಪೊಲೀಸರ ಸೂಚನೆ ಲೆಕ್ಕಿಸದೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಬಳಿಕ ಪೊಲೀಸರು ಲಾಠಿಚಾರ್ಜ್ ಮಾಡಿದ್ದಲ್ಲದೆ, ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ಟಿಯರ್ ಗ್ಯಾಸ್ ಮೂಲಕ ಚದುರಿಸಲು ಯತ್ನಿಸಿದ್ದರು. ಘಟನೆ ಬಳಿಕ ಸಿಸಿಟಿವಿ ಮತ್ತು ಮೊಬೈಲ್, ಕ್ಯಾಮೆರಾ ವಿಡಿಯೋಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣ ಸಂಬಂಧಿಸಿ ಈವರೆಗೆ 25ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಧ್ಯೆ ಕೃತ್ಯದಲ್ಲಿ ಕೇರಳದ ನಿವಾಸಿಗಳು ಭಾಗಿಯಾಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಆದರೆ ಈವರೆಗೆ ಬಂಧಿತರಲ್ಲಿ ಕೇರಳದ ಮಂದಿ ಯಾರೂ ಇಲ್ಲ. ಹೀಗಾಗಿ ತಪ್ಪಿಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಟವರ್ ಲೊಕೇಶನ್ ಆಧರಿಸಿ ಬಿಲ ತೋಡುವ ಕೆಲಸ ಮಾಡಿದ್ದಾರೆ. ಪೊಲೀಸರ ಈ ಕ್ರಮದಿಂದಾಗಿ ಅಮಾಯಕರಿಗೂ ನೋಟಿಸ್ ಜಾರಿಯಾಗುವಂತಾಗಿದ್ದು ವಿನಃ ಕಾರಣ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಸಂಬಂಧಿಕರ ಮನೆಗಳಿಗೆ ಆಗಮಿಸಿದ್ದ ಬಡ ಮಹಿಳೆಯರಿಗೂ ನೋಟಿಸ್ ಜಾರಿಯಾಗಿದ್ದು ಮುಸ್ಲಿಂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಗಂಭೀರ ಅಪರಾಧ ಆಗಿರುವ ಹಿನ್ನೆಲೆಯಲ್ಲಿ ನೋಟಿಸ್ ಪಡೆದವರು ತಾವು ಆಗಮಿಸಿದ್ದ ಬಗ್ಗೆ ಸೂಕ್ತ ಕಾರಣಗಳನ್ನು ಪೊಲೀಸರಿಗೆ ನೀಡಬೇಕಾಗಿದೆ. ವಿಚಾರಣೆ ವೇಳೆ ಸಂಶಯಾಸ್ಪದ ಕಂಡುಬಂದಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಗಡಿಜಿಲ್ಲೆ ಕಾಸರಗೋಡಿನ ಮಂಜೇಶ್ವರ, ಉಪ್ಪಳ, ಕುಂಬ್ಳೆ ಪರಿಸರದ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಒಟ್ಟಿನಲ್ಲಿ ಮಂಗಳೂರಿನ ಹಿಂಸಾಚಾರ ಘಟನೆಯ ನೈಜ ಆರೋಪಿಗಳು ತಲೆಮರೆಸಿಕೊಂಡಿದ್ದರೆ, ಈಗ ಅಮಾಯಕರು ತಾವು ಮಾಡದ ತಪ್ಪಿಗೆ ಪರಿತಪಿಸುವಂತಾಗಿದೆ.