ಮಂಗಳೂರು: ಪೌರತ್ವ ಮಸೂದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆ ಹಿಂಸಾರೂಪ ಪಡೆದು ಗೊಲೀಬಾರ್‍ಗೆ ಇಬ್ಬರು ಬಲಿಯಾಗಿದ್ದರು. ಇದಾದ ಬಳಿಕ ಅರಬ್ ರಾಷ್ಟ್ರದಲ್ಲಿರುವ ಕರಾವಳಿ ಮೂಲದ ಮುಸ್ಲಿಂ ಯುವಕರು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್‍ಗಳು ಮತ್ತು ವಾಯ್ಸ್ ಮೆಸೇಜ್‍ಗಳನ್ನು ಅಪ್ಲೋಡ್ ಮಾಡುತ್ತಿದ್ದರು.
ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಬಾರದು. ಅಂತವರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ. ವಿದೇಶದಲ್ಲಿರುವವರ ಪಾಸ್‍ಪೋರ್ಟ್ ಮುಟ್ಟುಗೋಲು ಹಾಕುತ್ತೇವೆ ಎಂದು ಮಂಗಳೂರು ಪೊಲೀಸರು ಪದೇ ಪದೇ ಹೇಳುತ್ತಿದ್ದರು. ಆದರೂ ಈ ಯುವಕರು ತಮ್ಮ ಚಾಳಿ ಮುಂದುವರೆಸಿದ್ದರು.
ಇದೇ ರೀತಿ ಹಿಂದೂಗಳನ್ನು ಕೊಂದು ಹಾಕುತ್ತೇನೆಂದು ವಾಯ್ಸ್ ಮೆಸೇಜ್ ಬೆದರಿಕೆಯನ್ನು ವಾಟ್ಸಾಪ್ ಸಂದೇಶ ಮೂಲಕ ಹರಿಯ ಬಿಟ್ಟಿದ್ದ ದಕ್ಷಿಣ ಕನ್ನಡದ ವಿಟ್ಲದ ಪೆರುವಾಯಿ ನಿವಾಸಿ, ಕತಾರ್ ದೇಶದಲ್ಲಿ ಉದ್ಯೋಗದಲ್ಲಿದ್ದ 25 ವರ್ಷದ ಅನ್ವರ್ ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಸಿಎಎ, ಎನ್.ಆರ್.ಸಿ ವಿರೋಧಿಸಿ ಹಿಂದೂಗಳನ್ನು ಕೊಲ್ಲುತ್ತೇನೆ ಎಂದು ಪ್ರಚೋದನಕಾರಿಯಾಗಿ ಮಾತನಾಡಿ ಅದರ ವಾಯ್ಸ್ ಮೆಸೇಜನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ವರ್ ಹರಿಯಬಿಟ್ಟಿದ್ದ. ವಿದೇಶದಿಂದ ವಾಯ್ಸ್ ಮೆಸೇಜ್ ಕಳಿಸಿ ಪ್ರಚೋದನೆ ನೀಡುತ್ತಿದ್ದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಹಿನ್ನೆಲೆ ಊರಿಗೆ ವಾಪಸಾಗಿದ್ದ ಅನ್ವರ್ ಅನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಇದೇ ರೀತಿ ಪ್ರಚೋದನಕಾರಿ ಮೆಸೇಜ್ ಗಳನ್ನು ಹರಿಯ ಬಿಟ್ಟಿದ್ದ ವಿದೇಶದಲ್ಲಿರುವ ಕರಾವಳಿ ಯುವಕರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದು, ಅವರ ಬಂಧನಕ್ಕೂ ಬಲೆ ಬೀಸಿದ್ದಾರೆ.