ಮಂಗಳೂರು: ಪೌರತ್ವ ಮಸೂದೆಯನ್ನು ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಗೊಲೀಬಾರ್ ನಲ್ಲಿ ಸಾವನ್ನಪ್ಪಿದ್ದರು. ಈ ಗೋಲಿಬಾರ್ ನ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದ್ದು ಇದೀಗ ಘಟನೆಯ ತನಿಖೆ ಚುರುಕು ಪಡೆದಿದೆ.
ಮ್ಯಾಜಿಸ್ಟ್ರೇಟ್ ತನಿಖೆಗೆ ಸರ್ಕಾರದಿಂದ ನೇಮಕಗೊಂಡ ಉಡುಪಿ ಜಿಲ್ಲಾಧಿಕಾರಿ ಡಾ.ಜಿ. ಜಗದೀಶ್ ಇಂದು ಮಂಗಳೂರಿಗೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಜಗದೀಶ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧು ರೂಪೇಶ್ ಬಳಿ ಮೊದಲು ಘಟನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಿದ್ದಾರೆ. ಬಳಿಕ ಹಿಂಸಾಚಾರ ಹಾಗೂ ಗೊಲೀಬಾರ್ ನಡೆದ ನಗರದ ಸ್ಟೇಟ್ ಬ್ಯಾಂಕ್ ವೃತ್ತ, ಬಸ್ ನಿಲ್ದಾಣ ಆವರಣ, ಬಂದರು ಪೊಲೀಸ್ ಠಾಣೆ ಆವರಣದ ನೆಲ್ಲಿಕಾಯಿ ರಸ್ತೆಯಲ್ಲಿ ಪರಿಶೀಲನೆ ನಡೆಸಿದರು.
Advertisement
Advertisement
ಸ್ಥಳೀಯ ವರ್ತಕರು ಹಾಗೂ ಜನರ ಜೊತೆ ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಘಟನೆ ಸಂದರ್ಭ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಜೊತೆಗೆ 2020ರ ಜನವರಿ 7ರಂದು ಮಂಗಳೂರಿನ ಮಿನಿ ವಿಧಾನಸೌಧದಲ್ಲಿರುವ ಸಹಾಯಕ ಆಯುಕ್ತರ ಕಛೇರಿಯ ನ್ಯಾಯಾಲಯ ಸಭಾಂಗಣದಲ್ಲಿ ತನಿಖಾಧಿಕಾರಿಯಾದ ಉಡುಪಿ ಜಿಲ್ಲಾಧಿಕಾರಿ ಡಾ.ಜಿ.ಜಗದೀಶ್ ಅವರು ಪ್ರಕರಣದ ತನಿಖೆ ನಡೆಸಲಿದ್ದು, ಈ ವೇಳೆ ಘಟನೆಯ ಬಗ್ಗೆ ಮಾಹಿತಿಯುಳ್ಳ ಅಥವಾ ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಯಾರೇ ಆಗಲಿ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆಯನ್ನು ನೀಡಬಹುದಾಗಿದೆ ಎಂದು ತನಿಖಾಧಿಕಾರಿ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
Advertisement
ಇದೇ ವೇಳೆ, ಸಿಐಡಿ ಅಧಿಕಾರಿಗಳ ತಂಡವೂ ಮಂಗಳೂರಿನಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ಹಿಂಸಾಚಾರ ಘಟನೆ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ 15ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.