ಮಂಗಳೂರು: ಸಾಮಾನ್ಯವಾಗಿ ಕಾರ್ಪೋರೇಟರ್ ಸ್ಥಾನಕ್ಕೆ ಸ್ಪರ್ಧಿಸಲು ಹಣ, ಜನಬಲದ ಲಾಬಿಯೇ ಮುಖ್ಯವಾಗತ್ತೆ. ಇಂಥದ್ರಲ್ಲಿ ಮಂಗಳೂರಿನ ಪ್ರತಿಷ್ಠಿತ ಪಾಲಿಕೆ ಚುನಾವಣೆಗೆ ಫುಡ್ ಡೆಲಿವರಿ ಗರ್ಲ್ ಒಬ್ಬರು ಕಣಕ್ಕಿಳಿದಿದ್ದಾರೆ. ಝೊಮ್ಯಾಟೋ ಕಂಪನಿಯಲ್ಲಿ ಡೆಲಿವರಿ ಗರ್ಲ್ ಆಗಿದ್ದ ಮಹಿಳೆಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದು, ಅಚ್ಚರಿಗೆ ಕಾರಣವಾಗಿದೆ.
ಕರಾವಳಿಯ ಪ್ರತಿಷ್ಠಿತ ಮಂಗಳೂರು ಮಹಾನಗರ ಪಾಲಿಕೆಗೆ ಐದು ವರ್ಷಗಳ ಬಳಿಕ ಚುನಾವಣೆ ನಡೆಯುತ್ತಿದ್ದು, ಸ್ಪರ್ಧಾ ಕಣ ರಂಗೇರುತ್ತಿದೆ. ಕಾಂಗ್ರೆಸ್- ಬಿಜೆಪಿ ಮಧ್ಯೆ ಕಾರ್ಪೊರೇಷನ್ ಅಧಿಕಾರಕ್ಕಾಗಿ ಕಿತ್ತಾಟ ನಡೆದಿರುವಾಗಲೇ ಕಾಂಗ್ರೆಸ್ ಪಕ್ಷದ ಅಚ್ಚರಿಯ ನಡೆ ಎಲ್ಲರ ಗಮನಸೆಳೆದಿದೆ. ಮಂಗಳೂರು ನಗರದ ಮಣ್ಣಗುಡ್ಡ ವಾರ್ಡಿನಲ್ಲಿ ಕಳೆದ ಹದಿನೈದು ವರ್ಷಗಳಿಂದಲೂ ಬಿಜೆಪಿ ಗೆಲ್ಲುತ್ತಾ ಬಂದಿದೆ. ಈ ಬಾರಿಯೂ ಮೀಸಲಾತಿ ಮಹಿಳೆಗೆ ಸಿಕ್ಕಿದ್ದು, ಕಾಂಗ್ರೆಸ್ ಪಕ್ಷ ಮಾತ್ರ ಫುಡ್ ಡೆಲಿವರಿ ಮಾಡುತ್ತಿದ್ದ ಸಾಮಾನ್ಯ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಿ ಅಚ್ಚರಿ ಮೂಡಿಸಿದೆ.
Advertisement
Advertisement
ಈಗಾಗ್ಲೇ ಟಿಕೆಟ್ ಪಡೆದು ಮನೆ, ಮನೆ ಪ್ರಚಾರದಲ್ಲಿ ತೊಡಗಿರುವ ಮೇಘನಾದಾಸ್ ಮೂಲತಃ ಸಮಾಜಸೇವಕಿ. ಜೊತೆಗೆ ಕಳೆದೊಂದು ವರ್ಷದಿಂದ ಮಂಗಳೂರಿನಲ್ಲಿ ಫುಡ್ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಮಂಗಳೂರು ನಗರ ಸುತ್ತುವಾಗ ಇವರ ಗಮನಕ್ಕೆ ಬಂದಿದ್ದು ರಸ್ತೆಗಳ ಅವ್ಯವಸ್ಥೆ. ಈ ಬಗ್ಗೆ ಧ್ವನಿ ಎತ್ತಿದ್ದ ಮೇಘನಾಗೆ ಕಾಂಗ್ರೆಸ್ ಕಾರ್ಪೊರೇಷನ್ ಚುನಾವಣೆಗೆ ಟಿಕೆಟ್ ನೀಡಿದ್ದು, ಕಾರ್ಪೊರೇಟರ್ ಆಗಲು ಅವಕಾಶ ನೀಡಿದೆ.
Advertisement
ಚುನಾವಣೆಗೆ ಇನ್ನೇನು ನಾಲ್ಕೇ ದಿನ ಉಳಿದಿದ್ದು, ಅಭ್ಯರ್ಥಿಗಳ ಪ್ರಚಾರ ಭರಾಟೆ ಜೋರಾಗಿಯೇ ನಡೆದಿದೆ. ಆದರೆ ಹಣಬಲ, ಜನಬಲದ ಕೊರತೆ ಇರುವ ಮೇಘನಾ ತನ್ನ ಹಿತೈಷಿಗಳನ್ನು ಕಟ್ಟಿಕೊಂಡು ಪ್ರಚಾರ ಕಾರ್ಯದಲ್ಲಿದ್ದಾರೆ. ಮನೆ ಮನೆಗೆ ತಲುಪಿ ವಾರ್ಡಿನ ಸಮಸ್ಯೆಗಳನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ.
Advertisement
ಇದೇನಿದ್ದರೂ, ಸಾಮಾನ್ಯ ಮಹಿಳೆಗೆ ಟಿಕೆಟ್ ನೀಡಿ, ಸ್ಪರ್ಧಾ ಕಣಕ್ಕೆ ಇಳಿಸಿದ್ದೇ ಈ ಕಾಲದ ಅಚ್ಚರಿ. ಇನ್ನು ಚುನಾವಣೆಯಲ್ಲಿ ಜನರ ಮತ ಯಾರಿಗಿರುತ್ತೆ, ಸಾಮಾನ್ಯ ಮಹಿಳೆಯನ್ನು ಮತ ನೀಡಿ ಗೆಲ್ಲಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.