ಮಂಗಳೂರು: ಬಿಜೆಪಿ ಯುವಮೋರ್ಚಾ ಆಯೋಜಿಸಿರುವ ಮಂಗಳೂರು ಚಲೋ ರ‍್ಯಾಲಿ ತಡೆಯಲು ಪೊಲೀಸರು ಎಲ್ಲಾ ಸಿದ್ಧತೆಗಳನ್ನು ನಡೆಸಿದ್ದಾರೆ.
ಮೈಸೂರು, ಮಡಿಕೇರಿ ಭಾಗದಿಂದ ಬೈಕ್ ರ‍್ಯಾಲಿ ಮೂಲಕ ಬರುವ ಕಾರ್ಯಕರ್ತರಿಗೆ ಸೆ.6ರಂದು ಸುಳ್ಯ ತಾಲೂಕಿನ ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಸುಳ್ಯ ಪೊಲೀಸರು ಈಗ ಹಾಲ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅವಕಾಶ ನೀಡದಂತೆ ಸೂಚನೆ ನೀಡಿದ್ದಾರೆ.
ಈ ಮೂಲಕ ಮಂಗಳೂರು ಚಲೋ ಕಾರ್ಯಕ್ರಮ ತಡೆಯಲು ಸಿದ್ಧತೆ ನಡೆದಿದೆ ಎಂದು ಹೇಳಲಾಗಿದೆ. ಈಗಾಗಲೇ ಸಚಿವ ಯು.ಟಿ.ಖಾದರ್ ಹಾಗೂ ಎಸ್‍ಡಿಪಿಐ ಸಂಘಟನೆ ಬಿಜೆಪಿ ರ‍್ಯಾಲಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ರ‍್ಯಾಲಿಯಿಂದ ಶಾಂತಿಗೆ ಧಕ್ಕೆಯಾಗಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಬಿಜೆಪಿ ಈ ವಿರೋಧವನ್ನು ಹೇಗೆ ಎದುರಿಸಲಿದೆ ಎನ್ನುವುದು ಕುತೂಹಲದ ವಿಚಾರ.
ಏನಿದು ಮಂಗಳೂರು ಚಲೋ? ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿಂದೆ ಪಿಎಫ್‍ಐ ಸಂಘಟನೆ ಭಾಗಿಯಾಗಿದ್ದು, ಇದನ್ನು ನಿಷೇಧಿಸುವ ಸಲುವಾಗಿ ಸೆಪ್ಟೆಂಬರ್ 7 ರಂದು ಬಿಜೆಪಿ ಯುವಾ ಮೋರ್ಚಾ ಮಂಗಳೂರು ಚಲೋವನ್ನು ಆಯೋಜಿಸಿದೆ. ಸೆಪ್ಟೆಂಬರ್ 5 ರಿಂದ ಬಿಜೆಪಿ ಬೈಕ್ ರ‍್ಯಾಲಿ ಆರಂಭವಾಗಲಿದ್ದು, ಬೆಂಗಳೂರು, ಹುಬ್ಬಳ್ಳಿಯಿಂದ ರ‍್ಯಾಲಿ ಹೊರಟರೆ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರಿನಿಂದ ಸೆಪ್ಟೆಂಬರ್ 6ರಂದು ರ‍್ಯಾಲಿ ಹೊರಡಲಿದೆ. ಕೆಎಫ್ ಡಿ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದ್ದು, ಬಿಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಬೈಕ್ ಅಲ್ಲ ತಲೆ ಕೆಳಗಾಗಿ ಮಂಗ್ಳೂರಿಗೆ ಹೋದ್ರೂ ರಾಜ್ಯಕ್ಕೆ ಪ್ರಯೋಜನವಿಲ್ಲ: ಬಿಜೆಪಿಗೆ ಯುಟಿ ಖಾದರ್ ಟಾಂಗ್