ಮಂಗಳೂರು: ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಿದವರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕುತ್ತಿದೆ. ಅದೇ ರೀತಿಯಲ್ಲಿ ಮಂಗಳೂರಿನ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟ ಉಂಟು ಮಾಡಿದವರಿಗೆ ಪುಂಡು ಕಂದಾಯ ಹೇರಿ. ಆಸ್ತಿಯನ್ನು ಜಪ್ತಿ ಮಾಡುವ ಕಾನೂನು ತರಬೇಕೆಂದು ಸಚಿವ ಸಿ.ಟಿ.ರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಪೌರತ್ವ ಮಸೂದೆಯನ್ನು ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಹಿಂಸಾಚಾರದಲ್ಲಿ ಆಸ್ತಿಪಾಸ್ತಿ ಹಾನಿ ಮಾಡಿದವರನ್ನು ಗುರುತಿಸಿ ಅವರ ಆಸ್ತಿಗಳನ್ನು ಜಪ್ತಿ ಮಾಡಲಾರಂಭಿಸಿದ್ದಾರೆ. ಹೀಗಾಗಿ ನಮ್ಮ ರಾಜ್ಯ ಸರ್ಕಾರವೂ ಇಂತಹ ಕ್ರಮಕ್ಕೆ ಮುಂದಾಗಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ನಡೆಯುವ ಗಲಭೆಯನ್ನು ನಿಯಂತ್ರಿಸಬಹುದು ಎಂದು ಹೇಳಿದರು.
Advertisement
Advertisement
ಯಾವುದೇ ಚಳುವಳಿ ಇರಬಹುದು, ಯಾವುದೇ ಪಕ್ಷದ ಚಟುವಟಿಕೆ ಇರಬಹುದು. ಬೆಂಕಿ ಹಾಕುತ್ತೇವೆ ಎನ್ನುವವರ ಮತ್ತು ಬೆಂಕಿ ಹಾಕುವ ಗಲಭೆಕೋರರಿಗೆ ಈ ಮೂಲಕ ಮೂಗುದಾರ ತೊಡಿಸಬಹುದು. ಈ ಬಗ್ಗೆ ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ಹೇಳಿದರು.
Advertisement
ಇದಲ್ಲದೆ ಗಲಭೆ ಪ್ರಕರಣದಲ್ಲಿ ಅಮಾಯಕರು ಸತ್ತರೆ ಪರಿಹಾರ ನೀಡೋದು ಸಹಜ. ಆದರೆ ಕ್ರಿಮಿನಲ್ ಚಟುವಟಿಕೆ ಮಾಡಿದ್ದರೂ ಪರಿಹಾರ ನೀಡಬೇಕೇ ಎಂದು ಕಾಂಗ್ರೆಸ್ಸಿಗರನ್ನು ಪ್ರಶ್ನೆ ಮಾಡಿದ ಸಿಟಿ ರವಿ, ಸರ್ಕಾರವನ್ನು ಅಸ್ಥಿರ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಚುನಾವಣೆ ಸೋತಾಗ ಇವಿಎಂ ಮೇಲೆ ಅನುಮಾನ. ಈಗ ಪೊಲೀಸರ ಮೇಲೆ ಅನುಮಾನ ಬಂದಿದೆ ಎಂದು ವ್ಯಂಗ್ಯವಾಡಿದರು.