– ಕಿತ್ತಳೆ ಮಾರಿ ಶಾಲೆ ಕಟ್ಟಿದ ಅಕ್ಷರ ಸಂತನನ್ನು ಡಿಢೀರ್ ಭೇಟಿಯಾದ ಸಚಿವರು
ಮಂಗಳೂರು: ಕೊಣಾಜೆ ಸಮೀಪದ ಹರೇಕಳ ನ್ಯೂಪಡ್ಪುವಿನ ಸರ್ಕಾರಿ ಪ್ರೌಢಶಾಲೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಏಕಾಏಕಿ ತನ್ನ ಸ್ವಂತ ಆಸಕ್ತಿಯಿಂದ ಭೇಟಿ ನೀಡಿದರು.
ಇದ್ರಲ್ಲಿ ಏನು ವಿಶೇಷ ಅಂದುಕೊಳ್ಳಬಹುದು. ಈ ಶಾಲೆ ಹಾಗೂ ಶಾಲೆಯ ಸಂಸ್ಥಾಪಕರೇ ವಿಶೇಷ. ಅಕ್ಷರ ಸಂತ ಹರೇಕಳ ಹಾಜಬ್ಬ ಎಂದರೆ ಶಿಕ್ಷಣ ಕ್ಷೇತ್ರಕ್ಕೆ ಒಂದು ದೊಡ್ಡ ಆಸ್ತಿ. ಕಾರಣ ತನಗಿಲ್ಲದ ಶಿಕ್ಷಣ ತನ್ನ ಊರಿನ ಮಕ್ಕಳಿಗೆ ಸಿಗಬೇಕು ಎನ್ನುವ ಮಹದ್ದಾಸೆಯಿಂದ ಕಿತ್ತಳೆ ಮಾರುತ್ತಿದ್ದ ಹರೇಕಳ ಹಾಜಬ್ಬ, ಕಿತ್ತಳೆ ಮಾರಿ ಜೀವನ ಸಾಗಿಸಿ ಉಳಿದ ಹಣದಿಂದಲೇ ಅಂಗನವಾಡಿ ಆರಂಭಿಸಿ ಇದೀಗ ಕಾಲೇಜು ಕಟ್ಟಡ ತೆರೆಯುವ ತಯಾರಿಯಲ್ಲಿದ್ದಾರೆ.
Advertisement
Advertisement
ಇಂತಹ ಮಹಾನ್ ವ್ಯಕ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಆ ಕುಗ್ರಾಮಕ್ಕೆ ತೆರಳಿ ಭೇಟಿ ಮಾಡಿ, ಬೆನ್ನು ತಟ್ಟಿ ಅಭಿನಂದಿಸಿ, ಅವರ ಕೆಲಸಕ್ಕೆ ಸೈ ಎಂದಿರುವ ಶ್ರೀನಿವಾಸ ಪೂಜಾರಿ ಇದೀಗ ಎಲ್ಲರ ಪ್ರಶಂಸೆಗೆ ಕಾರಣರಾಗಿದ್ದಾರೆ.
Advertisement
ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲೆಯ ಆಟದ ಮೈದಾನ ನಿರ್ಮಾಣಕ್ಕೆ ಹತ್ತು ಲಕ್ಷ ರೂಪಾಯಿ ಸರ್ಕಾರದಿಂದ ತಕ್ಷಣ ಬಿಡುಗಡೆ ಮಾಡಿಸಿದ್ದಾರೆ. ಹರೇಕಳದ ಹಾಜಬ್ಬರು ಈ ಭಾಗದಲ್ಲಿ ಶಿಕ್ಷಣಕ್ಕಾಗಿ ಕ್ರಾಂತಿ ಮಾಡುವುದರೊಂದಿಗೆ ಶಾಲೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ನ್ಯೂಪಡ್ಪು ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿ, ಅದನ್ನು ಸರ್ಕಾರಕ್ಕೆ ನೀಡಿರೋದು ಅಷ್ಟ ಸಲೀಸಾದ ಕೆಲಸವಲ್ಲ ಎಂದಿದ್ದಾರೆ ಸಚಿವ ಶ್ರೀನಿವಾಸ ಪೂಜಾರಿ.
Advertisement
ಹಾಜಬ್ಬ ಅವರ ಬೇಡಿಕೆಯಂತೆ ಶಾಲೆಯ ಕ್ರೀಡಾ ಮೈದಾನ ಸೇರಿದಂತೆ ಅಭಿವೃದ್ದಿ ಚಟುವಟಿಕೆಗಳಿಗಳಿಗೆ 10 ಲಕ್ಷ ರೂಪಾಯಿ ಮಂಜೂರುಗೊಳಿಸಲಾಗಿದ್ದು, ಪ್ರಥಮ ಹಂತದಲ್ಲಿ 5 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಹಾಜಬ್ಬರ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯ ನಾಗರಿಕರಿಗೆ ಅನುಕೂಲವಾಗುವಂತೆ ಸರ್ಕಾರಿ ಬಸ್ ನೀಡಬೇಕೆಂಬ ಬೇಡಿಕೆಗೆ ಸಚಿವ ಪೂಜಾರಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ. ಮಾತ್ರವಲ್ಲದೆ, ಶಾಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಮಾಡುವ ಭರವಸೆಯನ್ನು ಕೂಡ ಸಚಿವರು ನೀಡಿದ್ದಾರೆ. ಬೇಸಿಗೆ ರಜೆ ಮುಗಿಯುವ ಮುನ್ನ ರಸ್ತೆ ನಿರ್ಮಾಣವಾಗುವ ನಿರೀಕ್ಷೆ ಇದೆ.
ಸರ್ಕಾರಿ ಶಾಲೆಗಳಲ್ಲಿ ಮೆರಿಟ್ ಆಧಾರದಲ್ಲಿ ಆಯ್ಕೆಯಾದ ಶಿಕ್ಷಕರು ಇರುತ್ತಾರೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಸರಕಾರ ನೀಡುತ್ತಿದೆ. ಆದ್ದರಿಂದ ಸರ್ಕಾರಿ ಶಾಲೆಯ ಬಗ್ಗೆ ನಿರ್ಲಕ್ಷ ಮಾಡದೆ ಸ್ಥಳೀಯರು ತಮ್ಮ ನೆರೆ ಹೊರೆಯ ಶಾಲೆಗಳ ಸಮಗ್ರ ಅಭಿವೃದ್ಧಿ ಕೈ ಜೋಡಿಸಬೇಕು ಎಂದು ಸಚಿವರು ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ. ಸಚಿವ ಶ್ರೀನಿವಾಸ ಪೂಜಾರಿ ಅವರು ಶಾಲೆಗೆ ಭೇಟಿ ನೀಡಿ ಶಾಲೆಯ ಆಟದ ಮೈದಾನ ಅಭಿವೃದ್ಧಿಗೆ ಅನುದಾನ ಮಂಜೂರುಗೊಳಿಸಿದ್ದಾರೆ. ಅವರಿಗೆ ಶಾಲೆಯ ವತಿಯಿಂದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದಿದ್ದಾರೆ ಹರೇಕಳ ಹಾಜಬ್ಬ.
2004 ರಲ್ಲಿ ಕನ್ನಡ ಪತ್ರಿಕೆಯೊಂದು ಹಾಜಬ್ಬರನ್ನು `ವರ್ಷದ ವ್ಯಕ್ತಿ’ ಎಂದು ಪ್ರಶಸ್ತಿ ನೀಡಿ ಗುರುತಿಸುವ ಮೂಲಕ ಹಾಜಬ್ಬ ಬೆಳಕಿಗೆ ಬಂದಿದ್ದರು. ಬಳಿಕ ದೆಹಲಿಯ ಸಿಎನ್‍ಎನ್-ಐಬಿಎನ್ ‘ರಿಯಲ್ ಹೀರೋ’ ಪ್ರಶಸ್ತಿ ನೀಡಿ ಗೌರವಿಸಿತ್ತು.
ಮಂಗಳೂರು ವಿಶ್ವವಿದ್ಯಾನಿಲಯ ಇರುವ ಕೊಣಾಜೆ ಸಮೀಪದ ಹರೇಕಳದಲ್ಲಿ ಗ್ರಾಮೀಣ ಮಕ್ಕಳಲ್ಲಿ ಶಾಲೆಯ ಸೌಲಭ್ಯ ಇರಲಿಲ್ಲ. ಮಂಗಳೂರಿನ ಕೇಂದ್ರ ಪ್ರದೇಶ ಸ್ಟೇಟ್ ಬ್ಯಾಂಕ್ ಸರ್ಕಲಿನಲ್ಲಿ ಕಿತ್ತಳೆ ಹಣ್ಣು ಮಾರಾಟ ಮಾಡುವ ಕಾಯಕ ಮಾಡುತ್ತಿದ್ದ ಹಾಜಬ್ಬ ತಾವೇ ಶಾಲೆಯೊಂದನ್ನು ತನ್ನೂರಿನಲ್ಲಿ ನಿರ್ಮಿಸಿದ್ದರು.
ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ವಿದೇಶಿ ಮಹಿಳೆಯ ಆಂಗ್ಲ ಭಾಷೆಯ ಪ್ರಶ್ನೆಗೆ ಉತ್ತರ ನೀಡಲಾಗದ ಹಾಜಬ್ಬರಿಗೆ ಶಿಕ್ಷಣದ ಮಹತ್ವ ಅರಿವಾಗಿತ್ತು. ಈ ಹಿನ್ನೆಲೆಯಲ್ಲಿಯೇ ತನ್ನೂರಿನ ಮಕ್ಕಳಿಗೆ ಶಾಲೆ ತೆರೆಯಲು ಕಚೇರಿಯಿಂದ ಕಚೇರಿಗೆ ಅಲೆದು ಶಾಲೆ ನಿರ್ಮಾಣ ಮಾಡಿದ್ದರು. ಇವರ ಸಾಧನೆಯ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ಹೆಚ್ಚಿನ ಪ್ರಚಾರ ಪಡೆದುಕೊಂಡಿರಲಿಲ್ಲ. ಇದೀಗ ಅವರು ತನ್ನೂರಿನಲ್ಲಿ ಕಾಲೇಜು ಆರಂಭಿಸುವ ಆಶಯ ಹೊಂದಿದ್ದಾರೆ.