-ವಿಮಾನ ತೆರವು ಕಾರ್ಯಚರಣೆ
ಮಂಗಳೂರು: ಇಂದು ಸಂಜೆ 5.20ಕ್ಕೆ ಮಂಗಳೂರು ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಿದ್ದ ಪ್ಲೇನ್ ರನ್ ವೇಯಿಂದ ಹೊರ ಬಂದು ಆತಂಕವನ್ನು ಸೃಷ್ಟಿ ಮಾಡಿತ್ತು. ಪೈಲಟ್ ಸಮಯ ಪ್ರಜ್ಞೆಯಿಂದಾಗಿ 181 ಪ್ರಯಾಣಿಕರ ಜೀವ ಉಳಿದಿದೆ. ಇದೀಗ ವಿಮಾನದ ತೆರವು ಕಾರ್ಯಚರಣೆ ಅಂತಿಮವಾಗುವರೆಗೂ ಟೇಕಾಫ್ ಮತ್ತು ಲ್ಯಾಂಡಿಂಗ್ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
Advertisement
ರನ್ ವೇಯಿಂದ ಹೊರಬಂದಿರುವ ವಿಮಾನ ಇಂದು ರಾತ್ರಿ 8.30ಕ್ಕೆ ಅಬುಧಾಬಿಯತ್ತ ಪ್ರಯಾಣ ಬೆಳಸಬೇಕಿತ್ತು. ರಾತ್ರಿ ವೇಳೆಗೆ ರನ್ ವೇ ಸುಗಮಗೊಳಿಸಿ ಸೋಮವಾರ ವಿಮಾನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಇಂದು ರಾತ್ರಿ 8.30ಕ್ಕೆ ಪ್ರಯಾಣ ಬೆಳೆಸಬೇಕಿದ್ದ ಪ್ರಯಾಣಿಕರಿಗೆ ಮಂಗಳೂರಿನ ಹೋಟೆಲ್ ಗಳಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಸೋಮವಾರ ಬೆಳಗ್ಗೆವರೆಗೂ ಸಂಚಾರ ಸ್ಥಗಿತಗೊಳ್ಳಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
Advertisement
ಅಪಘಾತಕ್ಕೆ ಕಾರಣ ಏನು?
ಮಳೆಯ ಕಾರಣದಿಂದ ಸ್ಲಿಪ್ ಆಗಿ ವಿಮಾನ ರನ್ ವೇಯಿಂದ ಹೊರ ಬಂದಿದೆ ಎನ್ನಲಾಗುತ್ತಿದೆ. ಅಪಘಾತದಿಂದ ವಿಮಾನದ ಇಂಜಿನ್ ಭಾಗಕ್ಕೆ ಹಾನಿಯಾಗಿದ್ದು, ರಿಪೇರಿಗೆ ಮೂರು ತಿಂಗಳು ಸಮಯ ಬೇಕಾಗುತ್ತದೆ ತಜ್ಞರು ತಿಳಿಸಿದ್ದಾರೆ.
Advertisement
Advertisement
ಆಗಿದ್ದೇನು?
ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್- ಐಎಕ್ಸ್ 384 ವಿಮಾನ ಸಂಜೆ 5.20ಕ್ಕೆ ಲ್ಯಾಂಡ್ ಆಗಬೇಕಿತ್ತು. ರನ್ ವೇ ಮೇಲೆ ಬರುತ್ತಿದ್ದ ವಿಮಾನ ದಿಢೀರ್ ಅಂತಾ ಟ್ಯಾಕ್ಸಿ ವೇನತ್ತು ಚಲಿಸಿತ್ತು. ಕೂಡಲೇ ಎಚ್ಚೆತ್ತ ಪೈಲಟ್ ವಿಮಾನ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
2010ರಲ್ಲಿ ನಡೆದಿತ್ತು ದುರಂತ:
2010 ಮೇ 22ರಂದು ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಲ್ಯಾಂಡ್ ಆದ ಪರಿಣಾಮ 158 ಮಂದಿ ಸಾವನ್ನಪ್ಪಿದ್ದರು. ಮಂಗಳೂರು ವಿಮಾನ ನಿಲ್ದಾಣ ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿದ್ದು, ಲ್ಯಾಂಡಿಂಗ್ ಮತ್ತು ಟೇಕಾಫ್ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸುತ್ತಲೂ ಭದ್ರವಾದ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. 2018 ಜೂನ್ ನಲ್ಲಿ ಸುರಿದ ಮಳೆಗೆ ಈ ತಡೆಗೋಡೆ ಕುಸಿತ ಕಂಡಿತ್ತು. ಕೂಡಲೇ ಅಧಿಕಾರಿಗಳು ಗೋಡೆಗಳನ್ನು ರಿಪೇರಿ ಮಾಡಿಸಿದ್ದರು.
2010ರ ಅಪಘಾತಕ್ಕೆ ಕಾರಣ ಏನು?
2010ರಲ್ಲಿ 158 ಪ್ರಯಾಣಿಕರನ್ನು ಬಲಿ ತೆಗೆದುಕೊಂಡಿದ್ದ ವಿಮಾನ ದುರಂತಕ್ಕೆ ಕಾರಣ ಕ್ಯಾಪ್ಟನ್ ಝಡ್. ಗ್ಲುಸಿಕಾ ಕಾರಣ ಎಂದು ವರದಿಯಾಗಿತ್ತು. ವಿಮಾನವನ್ನು ರನ್ ವೇಯಲ್ಲಿ ಇಳಿಸದೇ ಸುತ್ತು ಹಾಕಿಸಿ ಎಂದು ಏರ್ ಪೋರ್ಟ್ ಅಧಿಕಾರಿಗಳು ಸೂಚನೆ ನೀಡಿದ್ದರು. ಆದ್ರೂ ಕ್ಯಾಪ್ಟನ್ ಟೇಬಲ್ ಟಾಪ್ ರನ್ ವೇಯಲ್ಲಿ ವಿಮಾನ ಇಳಿಸಿದ್ದರಿಂದ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
2018ರಲ್ಲಿ ಟೇಕಾಪ್ ವೇಳೆ ತಪ್ಪಿತ್ತು ದುರಂತ:
2018 ಜನವರಿಯಲ್ಲಿ ಟೇಕಾಫ್ ವೇಳೆಯೂ ದೊಡ್ಡ ಅನಾಹುತವೊಂದು ತಪ್ಪಿತ್ತು. ಅಂದು ನಿಲ್ದಾಣದ ಸುತ್ತಲಿನ ಪ್ರದೇಶದಲ್ಲಿ ಹುಲ್ಲು ತೆಗೆಯಲು ಟ್ರ್ಯಾಕ್ಟರ್ ಕರೆಸಲಾಗಿತ್ತು. ಆದ್ರೆ ಚಾಲಕ ತನ್ನ ಟ್ರ್ಯಾಕ್ಟರ್ ನ್ನು ರನ್ ವೇ ಅಂತ್ಯದಲ್ಲಿ ನಿಲ್ಲಿಸಿದ್ದನು. ಮುಂಬೈನತ್ತ ಹೊರಟಿದ್ದ ವಿಮಾನ ಟೇಕಾಪ್ ಆಗುವದರಲ್ಲಿತ್ತು. ಟ್ರ್ಯಾಕ್ಟರ್ ರನ್ ವೇ ಅಂತ್ಯದಲ್ಲಿ ನಿಂತಿರೋದು ಪೈಲಟ್ ಗೆ ಕಾಣಿಸಿರಲಿಲ್ಲ. ಟ್ರ್ಯಾಕ್ಟರ್ ಗಮನಿಸಿ ಟ್ರಾಫಿಕ್ ಕಂಟ್ರೋಲರ್ ವಿಮಾನದ ಹಾರಾಟವನ್ನು ರದ್ದುಗೊಳಿಸಿದ್ದರು.
ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಝಿಕ್ಕೋಡು ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.