ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿರೋ ಅಷ್ಟೂ ಕಾಮಿಡಿ ಕಲಾವಿದರನ್ನು ಒಂದೇ ಚಿತ್ರದಲ್ಲಿ ನೋಡಬೇಕೆಂಬುದು ಬಹುತೇಕ ಪ್ರೇಕ್ಷಕರ ಹಲವಾರು ವರ್ಷಗಳ ಕನಸು. ಆದರೆ ಇದುವರೆಗೂ ಅದು ತೃಪ್ತಿದಾಯಕವಾಗಿ ಸಾಕಾರಗೊಂಡಿದ್ದಿಲ್ಲ. ಪ್ರೇಕ್ಷಕರಲ್ಲಿರೋ ಈ ಆಕಾಂಕ್ಷೆಯನ್ನು ಅರ್ಥೈಸಿಕೊಂಡಿರೋ ನಿರ್ದೇಶಕ ಮಂಜು ಸ್ವರಾಜ್ ‘ಮನೆ ಮಾರಾಟಕ್ಕಿದೆ’ ಚಿತ್ರದ ಮೂಲಕ ಲೀಡ್ ಕಾಮಿಡಿ ಕಲಾವಿದರನ್ನು ಕೂಡಿಟ್ಟುಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಆರಂಭ ಕಾಲದಿಂದಲೂ ಪ್ರೇಕ್ಷಕರಲ್ಲೊಂದು ಕುತೂಹಲ ಇದ್ದೇ ಇತ್ತು. ಈ ಟ್ರೇಲರರ್ ನೋಡಿದ ಮೇಲಂತೂ ಅದು ಇಮ್ಮಡಿಸಿದೆ. ಯಾಕೆಂದರೆ ಈ ಟ್ರೇಲರ್ ಅಷ್ಟೊಂದು ಮಜವಾಗಿ ಮೂಡಿ ಬಂದಿದೆ.
ಮನೆ ಮಾರಾಟಕ್ಕಿದೆ ಎಸ್.ವಿ ಬಾಬು ನಿರ್ಮಾಣದ ಹದಿನಾರನೇ ಚಿತ್ರ. ಈವರೆಗೂ ಪಟಾಕಿ, ಶ್ರಾವಣಿ ಸುಬ್ರಮಣ್ಯದಂಥಾ ಸೂಪರ್ ಹಿಟ್ ಸಿನಿಮಾಗಳನ್ನು ಕೊಡಮಾಡಿರುವ ಮಂಜು ಸ್ವರಾಜ್ ನಿರ್ದೇಶನದ ಐದನೇ ಚಿತ್ರ. ಸಾಧು ಕೋಕಿಲಾ, ಚಿಕ್ಕಣ್ಣ, ಕುರಿ ಪ್ರತಾಪ್ ಮತ್ತು ರವಿಶಂಕರ್ ಗೌಡ ಇದರ ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಬಹು ವೈಶಿಷ್ಟ್ಯದ ಪಾತ್ರಕ್ಕೆ ಶ್ರುತಿ ಹರಿಹರನ್ ಜೀವ ತುಂಬಿದ್ದಾರೆ. ಇದೀಗ ಬಿಡುಗಡೆಯಾಗಿರೋ ಟ್ರೇಲರ್‍ನಲ್ಲಿ ಈ ಎಲ್ಲರ ಪಾತ್ರಗಳೂ ಕೂಡಾ ಪ್ರೇಕ್ಷಕರಿಗೆ ಪರಿಚಯವಾಗಿವೆ. ಅವೆಲ್ಲವೂ ತುಂಬಾನೇ ಮಜವಾದ ರೀತಿಯಲ್ಲಿ ಮೂಡಿ ಬಂದಿವೆ.
ಈ ಟ್ರೇಲರ್ ಮೂಲಕವೇ ಮನೆ ಮಾರಾಟಕ್ಕಿದೆ ಎಂಬುದು ಕಾಮಿಡಿ ಹಾರರ್ ಜಾನರಿನ ಚಿತ್ರವೆಂಬುದು ಸ್ಪಷ್ಟವಾಗಿಯೇ ಗೊತ್ತಾಗಿದೆ. ಹೀಗೆ ಎಲ್ಲ ಕಾಮಿಡಿ ನಟರನ್ನೂ ಕೂಡಾ ಒಂದೆಡೆ ಸೇರಿಸೋ ಸಾಹಸದಲ್ಲಿ ನಿರ್ದೇಶಕ ಮಂಜು ಸ್ವಾರಾಜ್ ಗೆದ್ದಿದ್ದಾರೆಂಬುದಕ್ಕೆ, ಈ ಸಿನಿಮಾ ಜನರೆಲ್ಲರಿಗೆ ಇಷ್ಟವಾಗಿ ದೊಡ್ಡ ಮಟ್ಟದಲ್ಲಿಯೇ ಗೆಲ್ಲುತ್ತದೆ ಎಂಬುದಕ್ಕೆ ಈ ಟ್ರೇಲರ್‍ನ ತುಂಬಾ ಸಾಕ್ಷಿಗಳು ಸಿಗುತ್ತವೆ. ಇದು ಕಾಮಿಡಿ ಥ್ರಿಲ್ಲರ್ ಜಾನರಿನ ಚಿತ್ರವೆಂದಾಕ್ಷಣ ಸಿದ್ಧ ಸೂತ್ರಗಳಿಗೆ ತಕ್ಕುದಾದ ಕಲ್ಪನೆ ಇಟ್ಟುಕೊಳ್ಳುವಂತಿಲ್ಲ. ಯಾಕೆಂದರೆ ಪ್ರೇಕ್ಷಕರೆಲ್ಲರಿಗೂ ಸರ್‍ಪ್ರೈಸ್ ಎಂಬಂಥಾ ಹಲವಾರು ಅಂಶಗಳು ಇಲ್ಲಿವೆಯಂತೆ. ಅದೇನೆಂಬುದು ಶೀಘ್ರದಲ್ಲಿಯೇ ಜಾಹೀರಾಗಲಿದೆ.