ಮಂಡ್ಯ: ಆರ್.ಟಿ.ಐ ಮೂಲಕ ಸಲ್ಲಿಸಿದ್ದ ಅರ್ಜಿಗೆ ಎರಡೂವರೆ ವರ್ಷಗಳಾದರೂ ಮಾಹಿತಿ ನೀಡದ ಕಾರಣ ತಹಶೀಲ್ದಾರ್ ಗೀತಾ ಅವರಿಗೆ ಮಾಹಿತಿ ಹಕ್ಕು ಆಯೋಗ 15 ಸಾವಿರ ರೂಪಾಯಿ ದಂಡ ವಿಧಿಸಿದೆ.
ಸದ್ಯ ಹೊಸಕೋಟೆಯ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿರುವ ಗೀತಾ ಈ ಹಿಂದೆ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ರು. ಈ ವೇಳೆ ಎನ್.ಶಿವರಾಮಂ ಎಂಬುವರು ಮದ್ದೂರು ತಾಲೂಕಿನ ಮಾರಸಿಂಗನಹಳ್ಳಿ ಗ್ರಾಮದ ದೇವೇಗೌಡ ಬಿನ್ ಕೆಂಚೇಗೌಡ ಅವರಿಗೆ ಮಂಜೂರು ಮಾಡಲಾಗಿದ್ದ ಜಮೀನಿನ ಸಾಗುವಳಿ ಚೀಟಿ ಮತ್ತು ಸಾಗುವಳಿ ಚೀಟಿ ವಿತರಣಾ ಸಹಿತ ನಕಲು ಪ್ರತಿ ನೀಡುವಂತೆ 2017ರ ಜೂನ್ 27 ರಂದು ಮಾಹಿತಿ ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು.
Advertisement
Advertisement
ಸಾರ್ವಜನಿಕ ಮಾಹಿತಿ ಅಧಿಕಾರಿಯಾದ ತಹಶೀಲ್ದಾರ್ ಯಾವುದೇ ಮಾಹಿತಿ ನೀಡದ ಕಾರಣ ಅರ್ಜಿದಾರರು ಈ ಬಗ್ಗೆ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಮಾಹಿತಿ ಆಯೋಗದ ನೇತೃತ್ವದಲ್ಲಿ ನಡೆದ ವಿಚಾರಣೆ ವೇಳೆ ಅರ್ಜಿದಾರರಿಗೆ ಮುಂದಿನ ದಿನಾಂಕದೊಳಗೆ ಮಾಹಿತಿ ನೀಡಬೇಕೆಂದು ಮಾಹಿತಿ ಆಯುಕ್ತರಾದ ಎಸ್.ಎಸ್.ಪಾಟೀಲ್ ತಹಶೀಲ್ದಾರ್ ಗೀತಾ ಅವರಿಗೆ ಆದೇಶಿಸಿದ್ದರು.
Advertisement
ಗೀತಾ ಅವರು ಆಯೋಗ ನೀಡಿದ್ದ ದಿನಾಂಕದಂದು ಸಹ ಮಾಹಿಯನ್ನು ನೀಡಿರಲಿಲ್ಲ. ಇದಲ್ಲದೇ ತಹಶೀಲ್ದಾರ್ ಗೀತಾ ಅವರು ಆಯೋಗಕ್ಕೆ ಖುದ್ದಾಗಿ ಹಾಜರಾಗಬೇಕೆಂದು ತಿಳಿಸಿದ್ದರು. ಆದರೆ ಸೂಕ್ತ ಕಾರಣ ನೀಡದೇ ಗೀತಾ ಅವರು ಗೈರು ಹಾಜರಾಗಿ ಆಯೋಗದ ಆದೇಶವನ್ನು ಉಲ್ಲಂಘನೆ ಮಾಡಿದ್ದರು. ಹೀಗಾಗಿ ಮಾಹಿತಿ ಹಕ್ಕು ಆಯುಕ್ತರು ತಹಶೀಲ್ದಾರ್ ಗೀತಾಗೆ 15 ಸಾವಿರ ರೂ. ಸಾವಿರ ದಂಡವನ್ನು ವಿಧಿಸಿದ್ದಾರೆ. ಈ ದಂಡವನ್ನು ಅವರ ಪ್ರತಿ ತಿಂಗಳ ಸಂಬಳದಲ್ಲಿ ಮೂರು ಕಂತುಗಳಲ್ಲಿ 5 ಸಾವಿರ ರೂಪಾಯಿಯಂತೆ ಒಟ್ಟು 15 ಸಾವಿರ ರೂಪಾಯಿಗಳನ್ನು ಕಡಿತಗೊಳಿಸಿ ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡುವಂತೆ ಆದೇಶ ಹೊರಡಿಸಿದ್ದಾರೆ.