– ಸುಮಲತಾಗೆ ನಟ ದರ್ಶನ್, ಯಶ್ ಸಾಥ್
ಮಂಡ್ಯ: ಹೈವೊಲ್ಟೇಜ್ ಕ್ಷೇತ್ರವಾಗಿರೋ ಮಂಡ್ಯದಲ್ಲಿ ಘಟಾನುಘಟಿಗಳ ಸ್ಪರ್ಧೆಯಿಂದ ಗಮನ ಸೆಳೆದಿರೋ ಕ್ಷೇತ್ರದಲ್ಲಿಂದು ದಿನವಿಡೀ ಪಾಲಿಟಿಕ್ಸ್ ನಡೆಯಲಿದೆ. ಕಾರಣ ಸುಮಲತಾ ಇಂದು ನಾಮಪತ್ರ ಸಲ್ಲಿಸಲಿದ್ದು, ನಟರಾದ ದರ್ಶನ್, ಯಶ್ ಭಾಗಿಯಾಗಲಿದ್ದಾರೆ. ಅಲ್ಲದೆ ಬಹಿರಂಗ ಸಮಾವೇಶ ನಡೆಯಲಿದ್ದು, ಸಿಎಂಗೆ ಭರ್ಜರಿಯಾಗಿಯೇ ಟಾಂಗ್ ನೀಡಲು ವೇದಿಕೆ ಸಜ್ಜಾಗಿದೆ.
ಹೌದು. ರಾಜ್ಯದ ಹೈವೊಲ್ಟೇಜ್ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರ ಇಂದು ರಣೋತ್ಸಾಹದ ರಾಜಕೀಯ ಸಂಗ್ರಾಮಕ್ಕೆ ಸಾಕ್ಷಿಯಾಗಲಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಸುಮಲತಾ ಅಂಬರೀಶ್ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕಾಗಿ ಅಂಬಿ ಅಭಿಮಾನಿಗಳು ಅಖಾಡದ ಫೈಟ್‍ಗೆ ಸಜ್ಜಾಗಿದೆ.
ಮಂಗಳವಾರ ರಾತ್ರಿಯೇ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಸುಮಲತಾ ಬೆಳಗ್ಗೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಬೆಳಗ್ಗೆ 11ಕ್ಕೆ ಮಂಡ್ಯದ ಡಿಸಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಾದ ಬಳಿಕ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ನಡೆಯುವ ಬೃಹತ್ ಬಹಿರಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸುಮಲತಾ ಪರ ಪ್ರಚಾರಕ್ಕೆ ಸ್ಯಾಂಡಲ್‍ವುಡ್ ದಂಡೇ ಹರಿದು ಬರುವ ಸಾಧ್ಯತೆ ಇದೆ. ಅದರಲ್ಲೂ ನಟ ದರ್ಶನ್ ಹಾಗೂ ಯಶ್ ಭಾಗವಹಿಸುತ್ತಾ ಇರೋದು ಮಂಡ್ಯದ ರಣಕಣವನ್ನು ಮತ್ತಷ್ಟು ರಂಗೇರಿಸಿದೆ. ಇದಲ್ಲದೆ ಹಿರಿಯ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕರು ಸಾಥ್ ನೀಡಲಿದ್ದಾರೆ. ಜೊತೆಗೆ ಕಾಂಗ್ರೆಸ್ ನ ಕೆಲ ಅತೃಪ್ತರು ಭಾಗವಹಿಸುವ ಸಾಧ್ಯತೆ ಇದೆ.
ಇತ್ತ ಸುಮಲತಾ ಅಂಬರೀಶ್ ಗೆ ಟಕ್ಕರ್ ಕೊಡಲು ತೀರ್ಮಾನಿಸಿರುವ ಸಿಎಂ ಕುಮಾರಸ್ವಾಮಿ, ನಿನ್ನೆ ರಾತ್ರಿ ಮಂಡ್ಯದ ಕೆ.ಆರ್.ಎಸ್. ನ ಖಾಸಗಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದು, ಜಿಲ್ಲೆಯ ಜೆಡಿಎಸ್- ಕಾಂಗ್ರೆಸ್ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೆ ಇಂದು ಕೂಡ ಮಂಡ್ಯದಲ್ಲೇ ವಾಸ್ತವ್ಯ ಹೂಡಿ ಗೇಮ್ ಪ್ಲಾನ್ ರಚಿಸಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಸಂಜೆ ವೇಳೆಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದನಾಥ ಶ್ರೀಗಳ ಆಶಿರ್ವಾದ ಪಡೆದು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗ್ತಿದೆ. ಇತ್ತ ನಿಖಿಲ್ ಕುಮಾರಸ್ವಾಮಿ ಕೂಡ ಇಂದು ಶ್ರೀರಂಗಪಟ್ಟಣ, ಮದ್ದೂರು ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಲಿದ್ದಾರೆ.
ಒಟ್ಟಾರೆ ನಿಖಿಲ್ ವರ್ಸಸ್ ಸುಮಲತಾ ಸ್ಪರ್ಧೆಯಿಂದ ಹೈ ವೊಲ್ಟೇಜ್ ಕ್ಷೇತ್ರವಾಗಿರುವ ಮಂಡ್ಯದಲ್ಲಿ ಇಂದು ರಾಜಕೀಯ ನಾಯಕರು, ಸಿನಿಮಾ ನಟರ ದಂಡೇ ಬೀಡು ಬಿಟ್ಟಿದ್ದು, ಇಡೀ ರಾಜ್ಯದ ಜನರೇ ಕುತೂಹಲದಿಂದ ನೋಡುವಂತೆ ಮಾಡಿದೆ.