ಮಂಡ್ಯ: ಸಮ್ಮಿಶ್ರ ಸರ್ಕಾರದಲ್ಲಿ ಜಾರಿಗೆ ತಂದ ಯೋಜನೆಗಳನ್ನು ಬಿಜೆಪಿ ಸರ್ಕಾರ ಕೈ ಬಿಡುತ್ತಿದೆ ಎಂದು ದಳಪತಿಗಳು ಮಾಡುತ್ತಿದ್ದ ಆರೋಪಗಳು ಸತ್ಯವಾಗುತ್ತಿದ್ಯಾ ಎಂಬ ಪ್ರಶ್ನೆಗಳು ಈಗ ಮಂಡ್ಯ ಜಿಲ್ಲೆಯಲ್ಲಿ ಎದ್ದಿದೆ.
ಮಂಡ್ಯದ ಪ್ರಮುಖ ಸಕ್ಕರೆ ಕಾರ್ಖಾನೆಗಳಾದ ಮೈಶುಗರ್ ಮತ್ತು ಪಾಂಡಪುರ ಸಕ್ಕರೆ ಕಾರ್ಖಾನೆಗಳು ಮುಚ್ಚಿರುವ ಹಿನ್ನೆಯಲ್ಲಿ ಜಿಲ್ಲೆಯ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿ ಇದ್ದಾರೆ. ಹೀಗಾಗಿ ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಮೈಶುಗರ್ ಕಾರ್ಖಾನೆಯನ್ನು ಹೊಸದಾಗಿ ನಿರ್ಮಾಣ ಮಾಡುವುದಾಗಿ ಬಜೆಟ್‍ನಲ್ಲಿ ಹಣವನ್ನು ಸಹ ಘೋಷಣೆ ಮಾಡಿತ್ತು. ಆದರೆ ಈಗ ಸಚಿವ ಆರ್.ಅಶೋಕ್ ನನ್ನ ಮುಂದೆ ಹೊಸ ಕಾರ್ಖಾನೆ ನಿರ್ಮಾಣ ಮಾಡುವ ಪ್ರಸ್ತಾಪ ಇಲ್ಲ ಎನ್ನುವ ಮೂಲಕ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆ ಮಾಡಿದ ಯೋಜನೆಗೆ ಎಳ್ಳುನೀರು ಬಿಟ್ಟಂತೆ ಕಾಣುತ್ತಿದೆ.
Advertisement
Advertisement
ಮಂಡ್ಯದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಕೆಡಿಪಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತಾನಾಡಿದ ಸಚಿವ ಆರ್.ಅಶೋಕ್, ನನ್ನ ಮುಂದೆ ಇರೋದು ಪಿಎಸ್‍ಎಸ್‍ಕೆ ಕಾರ್ಖಾನೆ ಹಾಗೂ ಮೈಶುಗರ್ ಕಾರ್ಖಾನೆಗಳನ್ನು ಲೀಸ್‍ಗೆ ಕೊಡುವ ಪ್ರಸ್ತಾವನೆ. ಅದರಂತೆ ನಾವು ಈ ಎರಡು ಕಾರ್ಖಾನೆಗಳನ್ನು ಖಾಸಗಿ ಅವರಿಗೆ ಲೀಸ್‍ಗೆ ಕೊಡಲು ಮುಂದಾಗಿದ್ದೇವೆ. ಟೆಂಡರ್ ಕರೆದು ರೈತರು ಬೆಳೆದ ಕಬ್ಬಿಗೆ ಯಾರು ಸರಿಯಾದ ಬೆಲೆ ನೀಡುತ್ತಾರೋ ಅವರಿಗೆ ಮಾತ್ರ ಲೀಸ್‍ಗೆ ಕೊಡುತ್ತೇನೆ. ಮುಂದಿನ ಕಟಾವಿನ ಒಳಗೆ ಈ ಕೆಲಸ ಪ್ರಗತಿಯ ಹಂತಕ್ಕೆ ಬರುತ್ತದೆ. ಆದರೆ ಹೊಸ ಕಾರ್ಖಾನೆ ಕಟ್ಟುವ ಗಮನ ನನಗೆ ಇಲ್ಲ ಎಂದಿದ್ದಾರೆ.
Advertisement
Advertisement
ಈ ಎರಡು ಕಾರ್ಖಾನೆಗಳು ಸದ್ಯ ಕಬ್ಬನ್ನು ಅರೆಯದೆ ಪಾಳು ಬಿದ್ದಿವೆ. ಇಂದು ನಡೆದ ಕೆಡಿಪಿ ಸಭೆಯಲ್ಲಿ ಶಾಸಕರುಗಳ ಅಭಿಪ್ರಾಯವನ್ನು ಸಂಗ್ರಹ ಮಾಡಿಕೊಂಡಿದ್ದೇವೆ. ಲೀಸ್‍ಗೆ ಕೊಡಲು ಎಲ್ಲರೂ ಒಪ್ಪಿದ್ದಾರೆ. ಹೀಗಾಗಿ ಎರಡು ಕಾರ್ಖಾನೆಗಳನ್ನು ಲೀಸ್‍ಗೆ ಕೊಡುತ್ತೇವೆ. ಕೇವಲ ಕಾರ್ಖಾನೆಯನ್ನು ಮಾತ್ರ ಖಾಸಗಿ ಅವರಿಗೆ ನೀಡುತ್ತೇವೆ. ಕಾರ್ಖಾನೆಯ ಆಸ್ತಿಯನ್ನು ಸರ್ಕಾರವೇ ನಿರ್ವಹಣೆ ಮಾಡುತ್ತದೆ. ಈ ಬಗ್ಗೆ ಸಿಎಂ ಯಡಿಯೂರಪ್ಪ ಅವರೊಂದಿಗೆ ಹಾಗೂ ಸಿ.ಟಿ.ರವಿ ಅವರೊಂದಿಗೆ ಮಾತನಾಡಿದ್ದೇನೆ. ಆದಷ್ಟು ಬೇಗ ಕಾರ್ಖಾನೆಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದರು.