– ಕೆಆರ್ ಪೇಟೆ ಭಾಗದ ಶಾಲೆಗಳ ಪ್ರವಾಸ ರದ್ದು
ಮಂಡ್ಯ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆ ಬಿಸಿ ಶಾಲಾ ಮಕ್ಕಳ ಪ್ರವಾಸಕ್ಕೂ ತಟ್ಟಿದ್ದು, ಪ್ರವಾಸ ರದ್ದುಪಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.
ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಎಲ್ಲ ಶಾಲಾ ಮಕ್ಕಳ ಪ್ರವಾಸವನ್ನೂ ರದ್ದುಪಡಿಸುವಂತೆ ಕ್ಷೇತ್ರ ಶಿಕ್ಷಣ ಅಧಿಕಾರಿ ಸುಂದರ್ ಸುತ್ತೋಲೆ ಹೊರಡಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯ ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಪ್ರತಿಭಟನೆ ಹಾಗೂ ಗಲಭೆಗಳು ಜರುಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳಿದಾಗ ಮಕ್ಕಳಿಗೆ ಯಾವುದೇ ತೊಂದರೆಯಾಗಬಾರದು. ಹೀಗಾಗಿ ಕೆಆರ್ ಪೇಟೆ ತಾಲೂಕಿನ ವ್ಯಾಪ್ತಿಯ ಶಾಲೆಯ ಮಕ್ಕಳು ಪ್ರವಾಸಕ್ಕೆ ಹೋಗಬಾರದು. ಒಂದು ವೇಳೆ ಪ್ರವಾಸ ನಿಗದಿ ಮಾಡಿಕೊಂಡಿದ್ದರೂ ಕೈ ಬಿಡಬೇಕು ಎಂದು ಸುತ್ತೋಲೆಯಲ್ಲಿ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಶಾಲೆಯ ಮಕ್ಕಳಿಗೆ ಪ್ರವಾಸಕ್ಕೆ ಹೋಗುವುದು ಸಾಮಾನ್ಯ. ಆದರೆ ಈ ಬಾರಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪ್ರವಾಸ ರದ್ದು ಮಾಡಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣ ಅಧಿಕಾರಿ ಸುಂದರ್ ತಿಳಿಸಿದ್ದಾರೆ.