ಮಂಡ್ಯ: ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರ ದೇಹವೆಲ್ಲಾ ಬಂಗಾರ. ಆದರೆ ಕಿವಿ ಮಾತ್ರ ಹಿತ್ತಾಳೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ.
ಇಂದು ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಅವರು, 20 ವರ್ಷ ಅಧಿಕಾರ ಸಿಗದ ನನಗೆ ಜೆಡಿಎಸ್ ಪಕ್ಷ ಎಂ.ಪಿ ಮಾಡಿದೆ. ಕುಮಾರಸ್ವಾಮಿ ಮತ್ತು ದೇವೇಗೌಡ್ರು ಹಾಗೂ ನನ್ನ ಮಧ್ಯೆ ಯಾವುದೇ ಅಸಮಾಧಾನ ಇಲ್ಲ. ಸಣ್ಣ ಪುಟ್ಟ ಅಸಮಾಧಾನ ಇದ್ದರೆ ಸರಿಪಡಿಸಿಕೊಳ್ಳುತ್ತೇವೆ ಎಂದು ಹೇಳಿದರು.
ದೊಡ್ಡವರಿಗೆ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಅಧಿಕಾರ ಇದೆ. ಕೆಲ ಭಟ್ಟಂಗಿಗಳು ಕುಮಾರಸ್ವಾಮಿ ಬಳಿ ನನ್ನ ಬಗ್ಗೆ ಚಾಡಿ ಹೇಳಿದ್ದಾರೆ. ಯಾರು ಏನ್ ಹೇಳಿದರು ಅವರುಗಳು ಕೇಳಿ ಬಿಡುತ್ತಾರೆ. ಆ ಬಗ್ಗೆ ಕುಮಾರಸ್ವಾಮಿ ಅವರ ಬಳಿ ಮಾತನಾಡುವುದಕ್ಕೆ ನನಗೆ ಸಮಯ ಸಿಕ್ಕಿಲ್ಲ. ಡಿಕೆಶಿ ವಿಚಾರವಾಗಿ ಡೆಲ್ಲಿ ಹೋಗಿದ್ದರಿಂದ ಸಮಯ ಸಿಗಲಿಲ್ಲ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ, ದೇವೇಗೌಡರ ದೇಹ ಬಂಗಾರ ಆದರೆ ಕಿವಿ ಹಿತ್ತಾಳೆಯಾದ್ದರಿಂದ ಭಟ್ಟಂಗಿಗಳ ಮಾತು ಕೇಳುತ್ತಾರೆ. ಜೆಡಿಎಸ್ ಪಕ್ಷ ನನ್ನ ಎಂ.ಪಿ ಮಾಡಿದ್ದಕ್ಕೆ ನನಗೆ ಕೃತಜ್ಞತೆ ಇದೆ. ಜೆಡಿಎಸ್ ವರಿಷ್ಠರ ಮೇಲೆ ಗೌರವವಿದೆ. ದೇವೇಗೌಡರು ಹಲವು ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ. ನನ್ನ ಮುಂದೆ ಯಾವುದೇ ಅವಕಾಶ ಇಲ್ಲ. ನಾನು ಜೆಡಿಎಸ್ ಪಕ್ಷದಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.