ಮಂಡ್ಯ: ಕೆಲ ಕಿಡಿಗೇಡಿಗಳು ಹಾಕಿದ ಬೆಂಕಿಗೆ ಅಂಗಡಿಯೊಂದು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಜೊತೆಗೆ ಅಂಗಡಿಯೊಳಗಿದ್ದ ಸಿಲಿಂಡರ್ ಸ್ಫೋಟಗೊಂಡು ಕೆಲಹೊತ್ತು ಆತಂಕ ಸೃಷ್ಟಿಸಿದ ಘಟನೆ ಮಂಡ್ಯದ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪತ್ರಿಕಾ ವಿತರಕರಾಗಿ ಕೆಲಸ ಮಾಡುತ್ತಿದ್ದ ಅನಿಲ್ ಎಂಬವರ ಅಂಗಡಿಗೆ ಬೆಂಕಿಬಿದ್ದಿದ್ದು, ಸುಮಾರು 3 ಲಕ್ಷ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿವೆ. ಗ್ರಾಮದ ಒಳಗಿರುವ ಅಂಗಡಿಗೆ ಬೆಂಕಿ ಬಿದ್ದಿದ್ದರಿಂದ ಅಕ್ಕ-ಪಕ್ಕದ ಶುದ್ಧ ನೀರಿನ ಘಟಕವೂ ಸುಟ್ಟು ಭಸ್ಮವಾಗಿದೆ. ಜೊತೆಗೆ ಮನೆಗೂ ಬೆಂಕಿ ವ್ಯಾಪಿಸುವ ಆತಂಕ ವ್ಯಕ್ತವಾಗಿತ್ತು.
ತಡರಾತ್ರಿ ಘಟನೆ ನಡೆದಿದ್ದು, ಅಂಗಡಿಯೊಳಗಿನ ಸಿಲಿಂಡರ್ ಸ್ಫೋಟದ ಶಬ್ದಕ್ಕೆ ಎಚ್ಚರಗೊಂಡ ಸ್ಥಳೀಯರು ಮನೆಯಿಂದ ಹೊರಗೆ ಬಂದು ನೋಡಿದ್ದಾರೆ. ಅಂಗಡಿಗೆ ಬೆಂಕಿಹೊತ್ತಿ ಉರಿಯುತ್ತಿರುವುದು ಗಮನಕ್ಕೆ ಬಂದಿದ್ದು, ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವೈಯಕ್ತಿಕ ದ್ವೇಷಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಅಂಗಡಿ ಮಾಲೀಕ ಅನೀಲ್ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv