ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಾರಾಕಾಸ್ತ್ರ ತೋರಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು ಶ್ರೀರಂಗಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯವನಾದ ಹಾಲಿ ಬೆಂಗಳೂರಿನಲ್ಲಿ ವಾಸವಿರುವ ಉದಯ್(19) ಅಲಿಯಾಸ್ ಗೊಗ್ಗಯ್ಯ, ಕಲಾಕಾರ್‍ನನ್ನು ಬಂಧಿಸಲಾಗಿದೆ. ಹಾಗೆಯೇ ಆತನ ಜೊತೆಗಿದ್ದ ಅಪ್ರಾಪ್ತರನ್ನು ಮೈಸೂರಿನ ಬಾಲಮಂದಿರಕ್ಕೆ ದಾಖಲಿಸಲಾಗಿದ್ದು, ಆರೋಪಿಗಳಿಂದ 21.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಂಡ್ಯ ಎಸ್‍ಪಿ ಕೆ. ಪರಶುರಾಮ ತಿಳಿಸಿದ್ದಾರೆ.
Advertisement
Advertisement
ಪ್ರಕರಣ ಬೆಳಕಿಗಿ ಬಂದಿದ್ದು ಹೀಗೆ?
ಫೆ. 2ರಂದು ಶ್ರೀರಂಗಪಟ್ಟಣ ಟೌನ್ ನಿವಾಸಿ ಮಣಿಕುಮಾರ್ ಗೌರಿಪುರ ಅವರು ಗ್ರಾಮದ ಸಮೀಪ ಬೆಳಗ್ಗೆ 5.20ರ ಸುಮಾರಿಗೆ ಬೈಕ್‍ನಲ್ಲಿ ಹೋಗುತ್ತಿದ್ದರು. ಈ ವೇಳೆ ಮೈಸೂರು ಕಡೆಯಿಂದ ಎರಡು ಬೈಕ್‍ನಲ್ಲಿ ಬರುತ್ತಿದ್ದ ಐವರು ಅವರನ್ನು ಅಡ್ಡ ಹಾಕಿದರು. ಬಳಿಕ ಲಾಂಗ್‍ಗಳನ್ನು ತೋರಿಸಿ ಹಲ್ಲೆ ಮಾಡಿ, ಮಣಿಕುಮಾರ್ ಬಳಿಯಿದ್ದ ಒಂದು ಮೊಬೈಲ್, 500 ರೂ. ಹಣ ಹಾಗೂ ಇತರೆ ದಾಖಲಾತಿ ಜೊತೆಗೆ ಬೈಕ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Advertisement
Advertisement
ಈ ಸಂಬಂಧ ಕಾರ್ಯಾಚರಣೆಗಿಳಿದ ಪೊಲೀಸರು ತಮಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ಫೆ. 12ರಂದು ಶ್ರೀರಂಗಪಟ್ಟಣ ಬಸ್ ನಿಲ್ದಾಣದ ಬಳಿ ಐವರನ್ನು ಬಂಧಿಸಿದರು. ನಂತರ ನ್ಯಾಯಾಲಯದ ಎದುರು ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಹಲವು ವಿಷಯ ಹೊರಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಉದಯ್ ಮೈಸೂರಿನ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ರಿಮ್ಯಾಂಡ್ ರೂಮಿಗೆ ಹೋಗಿ, ಅಲ್ಲಿನ ಸಿಬ್ಬಂದಿಯನ್ನು ಬೆದರಿಸಿ ಕಾನೂನು ಸಂಘರ್ಷಕ್ಕೊಳಗಾದ ಅಪ್ರಾಪ್ತರನ್ನು ಕರೆದುಕೊಂಡು ವಾಪಾಸ್ ಬರುವಾಗ ಗೌರಿಪುರ ಬಳಿ ದರೋಡೆ ಮಾಡಿದ್ದಾನೆ ಎಂಬುದು ಬೆಳಕಿಗೆ ಬಂದಿತ್ತು. ಅಲ್ಲದೆ ಆರೋಪಿಗಳ ವಿರುದ್ಧ ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳಿವೆ. ಈ ಪೈಕಿ ಉದಯ್ ವಿರುದ್ಧ 32ಕ್ಕೂ ಹೆಚ್ಚು ಹಾಗೂ ಉಳಿದವರ ವಿರುದ್ಧ 34ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ತಿಳಿದುಬಂದಿದೆ.
ಆರೋಪಿಗಳಿಂದ 1 ಮಾರುತಿ ಸ್ವಿಫ್ಟ್ ಡಿಜೈರ್ ಕಾರು, 8 ದ್ವಿಚಕ್ರ ವಾಹನ, 12 ಗ್ರಾಂ ತೂಕದ ತಾಳಿ ಸಹಿತ ಕರಿಮಣಿ, ಚಿನ್ನದ ಗುಂಡು ಸಹಿತ ಸರ, 4 ಗ್ರಾಂ ಚಿನ್ನದ ಉಂಗುರ, 25 ಮೊಬೈಲ್, 1 ಟ್ಯಾಬ್, 1 ವೈಫೈ ಹಾಟ್‍ಸ್ಪಾಟ್, ಎರಡು ಕ್ಯಾಮೆರಾ, ಎರಡು ಲಾಂಗ್, ಎರಡು ಕಬ್ಬಿಣದ ರಾಡು, ಎರಡು ಸ್ಪಾನರ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‍ಪಿ ಮಾಹಿತಿ ನೀಡಿದ್ದಾರೆ.
ತನಿಖಾ ತಂಡದಲ್ಲಿದ್ದ ಡಿವೈಎಸ್‍ಪಿ ಅರುಣ್ ನಾಗೇಗೌಡ, ಸಿಪಿಐ ಕೆ.ವಿ ಕೃಷ್ಣಪ್ಪ, ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಹರೀಶ್‍ಬಾಬು, ಪಿಎಸ್‍ಐಗಳಾದ ಕೆ.ಎನ್ ಗಿರೀಶ್, ಮುದ್ದುಮಹದೇವ, ಸಿಬ್ಬಂದಿ ಚಿಕ್ಕಯ್ಯ, ಮಹೇಶ, ಆನಂದ, ಎಸ್.ಎಸ್ ರವೀಶ್, ಕೃಷ್ಣಶೆಟ್ಟಿ, ಶ್ರೀನಿವಾಸಮೂರ್ತಿ, ಟಿ.ಎಸ್ ಕುಮಾರ, ಎಸ್. ಅರುಣ್‍ಕುಮಾರ್, ರವಿಕುಮಾರಸ್ವಾಮಿ, ಎಸ್.ಎಸ್ ಚಂದ್ರಶೇಖರ್, ಮಲ್ಲಿಕಾರ್ಜುನ, ಕೃಷ್ಣೇಗೌಡ, ದಿನೇಶ್, ಜಗದೀಶಯ್ಯ ವಸ್ತ್ರದ್, ಎಚ್.ಟಿ ಮಂಜು, ಸಿಡಿಆರ್ ವಿಭಾಗದ ರವಿಕಿರಣ್, ಲೋಕೇಶ್, ಮಂಜುನಾಥ್, ಭಾರ್ಗವ, ಪ್ರಕಾಶ್ ಅವರನ್ನು ಜಿಲ್ಲಾ ಎಸ್‍ಪಿ ಅಭಿನಂದಿಸಿ ನಗದು ಬಹುಮಾನ ನೀಡಿದರು.