ಮಂಡ್ಯ: ಪತ್ನಿಯನ್ನು ಕೊಂದು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಪತಿಯನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಸಂಧ್ಯಾ(23) ಗಂಡನಿಂದಲೇ ಕೊಲೆಯಾಗಿರುವ ಮಹಿಳೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕುಂದೂರು ಬಳಿ ಈ ಘಟನೆ ನಡೆದಿದ್ದು, ವಾರದ ಬಳಿಕ ಪೊಲೀಸರ ವಿಚಾರಣೆಯ ಬಳಿಕ ಪತ್ನಿಯನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ.
ಮದ್ದೂರು ತಾಲೂಕಿನ ಹಾಗಲಹಳ್ಳಿ ಗ್ರಾಮದ ನಿವಾಸಿ ಷಡಕ್ಷರಿಯನ್ನು ಒಂದೂವರೆ ವರ್ಷದ ಹಿಂದಷ್ಟೇ ಸಂಧ್ಯಾ ಮದುವೆಯಾಗಿದ್ದರು. ಆದರೆ ಇವರ ಸಂಸಾರದಲ್ಲಿ ಬಿರುಕು ಸೃಷ್ಟಿಯಾಗಿ ಇತ್ತೀಚೆಗೆ ಗಂಡ, ಹೆಂಡತಿ ದೂರವಾಗಿದ್ರು. ತಂದೆ ಮನೆಯಲ್ಲಿದ್ದುಕೊಂಡು ಸಂಧ್ಯಾ ಕಂಪ್ಯೂಟರ್ ತರಬೇತಿಗೆ ಪಡೆಯುತ್ತಿದ್ದರು. ಆದರೆ ನ.16ರಂದು ಕಂಪ್ಯೂಟರ್ ಕ್ಲಾಸ್ ಗೆ ಹೋಗಿದ್ದ ಸಂಧ್ಯಾ ನಾಪತ್ತೆಯಾಗಿದ್ದರು. ಇದನ್ನೂ ಓದಿ: ಕ್ರಿಸ್‍ಮಸ್ ಮೆರವಣೆಗೆಯಲ್ಲಿ ಭಾರೀ ಅಪಘಾತ – 20 ಜನರಿಗೆ ತೀವ್ರಗಾಯ
ಈ ಹಿನ್ನೆಲೆ ಸಂಧ್ಯಾ ಪೋಷಕರು ಮನೆಗೆ ಮಗಳು ಬಾರದಿದ್ದಕ್ಕೆ ಬೆಳಕವಾಡಿ ಪೊಲೀಸ್ ಗೆ ನಾಪತ್ತೆ ದೂರು ನೀಡಿದ್ದರು. ಮತ್ತೊಂದೆಡೆ ಅಳಿಯ ಷಡಕ್ಷರಿ ವಿಷ ಸೇವಿಸಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸೇರಿದ್ದ. ಪರಿಣಾಮ ಪೊಲೀಸರು ಆತ ಆಸ್ಪತ್ರೆಯಿಂದ ಬಿಡುಗಡೆಯಾಗುವರೆಗೂ ಕಾದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಆರಂಭದಲ್ಲಿ ತನಗೇನು ಗೊತ್ತಿಲ್ಲ ಎನ್ನುತ್ತಿದ್ದ ಷಡಕ್ಷರಿ ಪೊಲೀಸರ ಟ್ರಿಟ್ಮೆಂಟ್ ಬಳಿಕ ತಪ್ಪನ್ನು ಒಪ್ಪಿಕೊಂಡಿದ್ದಾನೆ.
ಷಡಕ್ಷರಿ ಕಂಪ್ಯೂಟರ್ ಕ್ಲಾಸ್ ನಿಂದ ಸಂಧ್ಯಾನನ್ನು ಕರೆದುಕೊಂಡು ಬಂದು ಕುಂದೂರು ಬಳಿಯ ನಾಲೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ವಿಷ ಸೇವಿಸಿ ತಾನೇ ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಮೂಲಕ ಪ್ರಕರಣದಿಂದ ತಪ್ಪಿಸಿಕೊಳ್ಳಬಹುದು ಎಂದು ಪ್ಲಾನ್ ಮಾಡಿ ಕೊನೆಗೂ ಸಿಕ್ಕಿ ಹಾಕಿಕೊಂಡಿದ್ದಾನೆ. ಪೊಲೀಸರು ಪ್ರಸ್ತುತ ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.