ಮಂಡ್ಯ: ದಂಡುಪಾಳ್ಯ ಗ್ಯಾಂಗ್‍ನಲ್ಲಿ ಗುರುತಿಸಿಕೊಂಡಿದ್ದ ಓರ್ವ ಸೇರಿದಂತೆ ಇಬ್ಬರು ಕಳ್ಳರನ್ನು 36 ವರ್ಷದ ಬಳಿಕ ಮಂಡ್ಯದ ನಾಗಮಂಗಲ ತಾಲೂಕಿನ ಬೆಳ್ಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಾಗಡಿ ತಾಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ದೊಡ್ಡಮುನಿಯ ಮತ್ತು ಚಿಕ್ಕಮುನಿಯ ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳು ಅಣ್ಣ-ತಮ್ಮಂದಿರಾಗಿದ್ದು, 1981ರಲ್ಲಿ ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಒಂದು ಮತ್ತು 1984ರಲ್ಲಿ ನಾಗಮಂಗಲ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಮನೆಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇವರ ವಿರುದ್ಧ ರಾಜ್ಯದ ವಿವಿಧ ಠಾಣೆಯಲ್ಲಿ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನು ಬಂಧಿತರ ಪೈಕಿ ದೊಡ್ಡಮುನಿಯ ಕುಖ್ಯಾತ ದಂಡುಪಾಳ್ಯದ ತಂಡದಲ್ಲಿ ಗುರುತಿಸಿಕೊಂಡಿದ್ದ.
Advertisement
Advertisement
ಸುಮಾರು ವರ್ಷ ತಲೆಮರೆಸಿಕೊಂಡಿದ್ದ ಈ ಇಬ್ಬರು ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಮಾರ್ಚ್ 6ರಂದು ಮಾಗಡಿ ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಬಂಧಿಸಲಾಗಿದೆ. ನಾಗಮಂಗಲ ಸಿಪಿಐ ಹರೀಶ್ ಬಾಬು, ಎಎಸೈ ರವಿ, ಮುಖ್ಯಪೇದೆ ಸೋಮಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
Advertisement
ಬಂಧನದ ಬಳಿಕ ಆರೋಪಿಗಳನ್ನ ನಾಗಮಂಗಲ ಪಟ್ಟಣದ ಜೆಎಂಎಫ್‍ಸಿ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಧೀಶರು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಂಧಿತ ಆರೋಪಿಗಳು ಕೇವಲ ಕಳ್ಳತನದಲ್ಲಷ್ಟೇ ಭಾಗಿಯಾಗಿದ್ದಾರೆಯೇ ಅಥವಾ ಬೇರೆ ಪ್ರಕರಣದಲ್ಲಿ ಇದ್ದಾರೆಯೇ ಎಂಬುದು ವಿಚಾರಣೆ ಬಳಿಕವಷ್ಟೇ ತಿಳಿಯಬೇಕಿದೆ.
Advertisement