ಮಂಡ್ಯ: ನಗರಸಭೆ ಚುನಾವಣೆಗೆ ಮತದಾನ ಆರಂಭವಾಗಿದ್ದು, ಮಾಜಿ ಸಂಸದೆ ರಮ್ಯಾ ಅವರು ಮತದಾನ ಮಾಡಲು ಬರಲೇಬೇಕು ಅಂತ ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಗರಸಭೆ ಚುನಾವಣೆಗೆ ಮತ ಹಾಕಲು ಬರದಿದ್ರೆ ನೀವು ಕೂಡ ಮತ ಕೇಳಬೇಡಿ ಎಂದು ಮಂಡ್ಯ ಜನತೆ ಮಾಜಿ ಸಂಸದೆ ರಮ್ಯಾಗೆ ಎಚ್ಚರಿಕೆ ನೀಡಿದ್ದಾರೆ. ಇಂದು ನಗರಸಭೆಗೆ ಚುನಾವಣೆ ನಡೆಯಲಿದ್ದು 11ನೇ ವಾರ್ಡ್‍ನಲ್ಲಿ ರಮ್ಯಾ ಮತದಾನ ಮಾಡಬೇಕಿದೆ. ರಮ್ಯಾ ಮತದಾನ ಮಾಡದಿದ್ರೆ ಮತ ಕೇಳುವ ಹಕ್ಕು ನಿಮಗಿಲ್ಲ ಎಂದು ಸಾರ್ವಜನಿಕರು ಗರಂ ಆಗಿದ್ದಾರೆ.
ಅಲ್ಲದೇ ಮಂಡ್ಯ ನಗರಸಭೆ ಚುನಾವಣೆಗೆ ಓಟ್ ಹಾಕಲು ಬರದಿದ್ರೆ ಇನ್ನು ಮುಂದೆ ನೀವು ಕೂಡ ಓಟ್ ಕೇಳಬೇಡಿ. ಕಳೆದ ಬಾರಿ ವಿಧಾನಸಭೆ ಚುನಾಣೆಯಲ್ಲಿ ಮಂಡ್ಯದ ವಿದ್ಯಾನಗರದ ಮತಗಟ್ಟೆ ಸಂಖ್ಯೆ 168 ರಲ್ಲಿ ರಮ್ಯಾ ಮತದಾನ ಮಾಡಬೇಕಿತ್ತು. ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 420 ರಲ್ಲಿದ್ದ ರಮ್ಯಾ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡದೆ ಟೀಕೆಗೆ ಗುರಿಯಾಗಿದ್ದರು. ಹೀಗಾಗಿ ಇಂದು ಮಂಡ್ಯ ನಗರಸಭೆ ಚುನಾವಣೆ ನಡೆಯುತ್ತಿದ್ದು 11 ನೇ ವಾರ್ಡ್‍ನಲ್ಲಿ ರಮ್ಯಾ ಮತದಾನ ಮಾಡಬೇಕಿದೆ.
ಮತದಾರರ ಪಟ್ಟಿಯಲ್ಲಿ ರಮ್ಯಾ ಹೆಸರು ದಿವ್ಯಸ್ಪಂದನ ಎಂದಿದ್ದು, ಕ್ರಮಸಂಖ್ಯೆ 671 ಆಗಿದೆ. ವೇಣುಗೋಪಾಲ ದೇವಸ್ಥಾನದ ಎದುರು ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಮ್ಯಾ ಮತದಾನ ಮಾಡಬೇಕಿದೆ. ಒಂದು ವರ್ಷ ಎಂಟು ತಿಂಗಳಿಂದ ಮಂಡ್ಯ ಕಡೆ ತಲೆ ಹಾಕದ ರಮ್ಯಾ, ನಗರಸಭೆ ಚುನಾವಣೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯಬೇಕು. ಇಲ್ಲದಿದ್ರೆ ಅವರು ಚುನಾವಣೆಗೆ ನಿಂತು ನಮ್ಮನ್ನು ಮತ ಕೇಳಬಾರದು. ಅಷ್ಟೇ ಅಲ್ಲ ಚುನಾವಣಾ ಆಯೋಗ ಮತದಾನ ಮಾಡದವರ ಚುನಾವಣೆಗೆ ನಿಲ್ಲುವ ಅರ್ಹತೆಯನ್ನು ರದ್ದುಗೊಳಿಸುವ ಕಾನೂನು ತರಬೇಕು ಎಂದು, ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv