Connect with us

Cinema

ಮಹಿಳೆಯರ ಗೌರವ ಏನು ಅನ್ನೋದನ್ನು ಮಂಡ್ಯ ಜನ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ- ರಾಕ್‍ಲೈನ್

Published

on

ಮಂಡ್ಯ: ಮಹಿಳೆಯರ ಸ್ಥಾನಮಾನ, ಗೌರವ, ಮೌಲ್ಯವನ್ನು ಮಂಡ್ಯ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದಾರೆ.

ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸುಮಲತಾ ಅವರನ್ನು ಗೆಲ್ಲಿಸಿಕೊಟ್ಟಿದ್ದೀರಿ. ಮಂಡ್ಯ ಚುನಾವಣೆಯ ಶಕ್ತಿ ಏನು ಎಂದು ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನೀವು ತೋರಿಸಿಕೊಟ್ಟಿದ್ದೀರ ಎಂದು ಮಂಡ್ಯ ಜನತೆಯನ್ನು ಹಾಡಿ ಹೊಗಳಿದರು.

ಕಾರ್ಯಕ್ರಮದಲ್ಲಿ ಅಂಬರೀಶ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ವೇದಿಕೆ ಮೇಲೆ ಮಾತನಾಡಿದ ಅವರು, ಇಂದು ನಮ್ಮೆಲ್ಲರ ಪ್ರೀತಿಯ ಅಣ್ಣ ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ, ನಾವು ಇಂದು ಅಂಬಿ ಅಣ್ಣನನ್ನು ನೆನೆಸಿಕೊಂಡು ಒಂದು ಕ್ಷಣ ಮೌನವಾಗಿ ನಿಲ್ಲೋಣ ಎಂದು ಹೇಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರನ್ನೂ ನಿಲ್ಲಿಸಿ ಮೌನ ನಮನ ಸಲ್ಲಿಸಿದರು.

ಮಂಡ್ಯದ ಗಂಡು ಅಂಬರೀಶ್ ಅವರ ಈ ಜನ್ಮ ದಿನದ ಆಚರಣೆಯಲ್ಲಿ ಎಲ್ಲರೂ ಭಾಗಿಯಾಗಿದ್ದಕ್ಕೆ ಧನ್ಯವಾದ. ಇಂದು ಅಂಬಿ ಅವರ ಕುಟುಂಬಕ್ಕೆ ನೀವು ಬಹಳಷ್ಟು ಸಂತೋಷವನ್ನು ಕೊಟ್ಟಿದ್ದೀರಿ. ಈ ಚುನಾವಣೆಯಲ್ಲಿ ಒಂದಲ್ಲ, ಎರಡಲ್ಲ ಎಷ್ಟೊಂದು ವಿಚಾರವನ್ನ ನೀವು ನಾಡಿಗೆ, ದೇಶಕ್ಕೆ ಕಲಿಸಿಕೊಟ್ಟಿದ್ದೀರಿ ಅನ್ನೊದನ್ನ ವೇದಿಕೆ ಮೇಲಿರುವ ಇತರೇ ಕಲಾವಿದರು ಹೇಳುತ್ತಾರೆ ಎಂದರು.

ಬಳಿಕ ಇಂದು ಅಂಬಿ ಅಣ್ಣದ ಹುಟ್ಟುಹಬ್ಬ, ಆದರೆ ಅವರು ನಮ್ಮ ಜೊತೆ ಇಲ್ಲ. ನಿಮಗೆಲ್ಲ ಗೊತ್ತು ಅಣ್ಣ ತಮ್ಮ ಹುಟ್ಟುಹಬ್ಬದ ದಿನದಂದು ನಾನು ಮಂಡ್ಯದ ಜನರ ಜೊತೆ ಇರಬೇಕು. ಅವರ ಜೊತೆ ಬೆರೆಯಬೇಕು ಎಂದು ಹುಟ್ಟುಹಬ್ಬದ ಹಿಂದಿನ ದಿನದ ರಾತ್ರಿಯಿಂದ ಹಿಡಿದು ಪೂರ್ತಿ ದಿನವನ್ನು ನಿಮ್ಮ ಜೊತೆಯಲ್ಲೇ ಕಳೆಯುತ್ತಿದ್ದರು. ಇವತ್ತು ನಾವು ಅವರ ನೆನಪನ್ನು ಮನದಲ್ಲಿ ಇಟ್ಟುಕೊಂಡಿದ್ದೇವೆ. ಅವರು ಎಂದಿಗೂ ನಮ್ಮ ಮನದಲ್ಲಿ ಇರುತ್ತಾರೆ. ಮಂಡ್ಯದ ಜನರಿಂದ, ಅಭಿಮಾನಿಗಳಿಂದ ಅಂಬರೀಶ್ ಅವರು ಎಂದಿಗೂ ದೂರ ಆಗುವುದಿಲ್ಲ ಎಂದು ರೆಬೆಲ್ ಸ್ಟಾರ್ ಅವರನ್ನು ನೆನೆದರು.

ಈ ಬಾರಿ ಲೋಕಸಭಾ ಚುನಾವಣೆಗೆ ಸುಮಲತಾ ಅವರ ಪರವಾಗಿ ಕನ್ನಡ ಚಿತ್ರರಂಗದ ಅನೇಕರು ದುಡಿದಿದ್ದಾರೆ. ಅದರಲ್ಲೂ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಚುನಾವಣೆ ಬಳಿಕ ನಾನು ದರ್ಶನ್ ಹಾಗೂ ಯಶ್ ಬಳಿ, ನೀವು ನನಗಿಂತ ವಯಸ್ಸಿನಲ್ಲಿ ದೊಡ್ಡವರಾಗಿದ್ದರೆ ನಿಮ್ಮ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿದ್ದೆ ಎಂದು ಹೇಳಿದ್ದೆ. ಯಾಕೆಂದರೆ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಬೆಳೆದಿರುವ ನಾಯಕ ನಟರು ಯಾವತ್ತೂ ಇಂತಹ ರಿಸ್ಕ್ ತೆಗೆದುಕೊಳ್ಳಲ್ಲ. ಅಂತಹ ಧೈರ್ಯವನ್ನ ದರ್ಶನ್ ಹಾಗೂ ಯಶ್ ಇಬ್ಬರೂ ಮಾಡಿದ್ದಾರೆ. ಇತಿಹಾಸದಲ್ಲಿ ಇನ್ನು ಯಾರು ಮಾಡದಂತಹ ಸಾಧನೆಯನ್ನು ಇವರು ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅಂಬಿ ಅಭಿಮಾನಿಗಳ ಸಂಘ, ಬಿಜೆಪಿ, ರೈತ ಸಂಘ ಎಲ್ಲರೂ ಈ ಚುನಾವಣೆಯಲ್ಲಿ ಸುಮಲತಾ ಅವರನ್ನು ಬೆಂಬಲಿಸಿದ್ದೀರಿ. ನಿಮ್ಮೆಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿ ನಮಸ್ಕರಿಸಿದರು.

Click to comment

Leave a Reply

Your email address will not be published. Required fields are marked *