– 1 ಲಕ್ಷ ಅಭಿಮಾನಿಗಳಿಂದ ಭಾವಪೂರ್ಣ ನಮನ
ಮಂಡ್ಯ: ಜಿಲ್ಲೆಗೂ ಹಾಗೂ ಅಂಬರೀಶ್ ಅವರಿಗೂ ಕರುಳಬಳ್ಳಿ ಸಂಬಂಧ. ಅಂಬಿ ಅಗಲಿಕೆಯಿಂದ ಕಣ್ಣೀರಾಗಿದ್ದ ಮಂಡ್ಯ ಜನ ಇಂದು ಮಂಡ್ಯದಲ್ಲಿ ಅಂಬಿ ಅವರಿಗೆ ಶ್ರದ್ಧಾಂಜಲಿ, ನುಡಿ ನಮನ ಸಲ್ಲಿಸುತ್ತಿದ್ದಾರೆ. ಅಂಬರೀಶ್ ಪತ್ನಿ ಸುಮಲತಾ ಹಾಗೂ ಮಗ ಅಭಿಷೇಕ್ ಸೇರಿದಂತೆ ರಾಜಕೀಯ ಮತ್ತು ಚಿತ್ರರಂಗದ ದಿಗ್ಗಜರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಮಂಡ್ಯ ನಗರದಾದ್ಯಂತ ಎಲ್ಲಿ ನೋಡಿದರೂ ಅಂಬರೀಶ್ ಸ್ಮರಣೆ ನಡೆಯುತ್ತಿದೆ. ತಮ್ಮನ್ನಗಲಿದ ಅಂಬರೀಶ್ ನೆನೆದು ಇಂದಿಗೂ ಕಣ್ಣೀರಾಗುತ್ತಿರುವ ಅವರ ಅಭಿಮಾನಿಗಳು, ಇಂದು ಮಂಡ್ಯದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂದು ಸಂಜೆ ಐದು ಗಂಟೆ ಸುಮಾರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಆರಂಭವಾಗಲಿದ್ದು, ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಲಕ್ಷಾಂತರ ಜನ ಅಂಬರೀಶ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್, ಸಿಎಂ ಕುಮಾರಸ್ವಾಮಿ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಸೇರಿದಂತೆ ಹಲವು ಜನ ರಾಜಕಾರಣಿಗಳು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಟರಾದ ಶಿವರಾಜ್‍ಕುಮಾರ್, ಜಗ್ಗೇಶ್, ದೊಡ್ಡಣ್ಣ, ನಟ ಪುನೀತ್ ರಾಜ್‍ಕುಮಾರ್, ಸುದೀಪ್, ದರ್ಶನ್, ಯಶ್ ಸೇರಿದಂತೆ ಹಲವು ಜನ ಚಿತ್ರರಂಗದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆಯುತ್ತಿದ್ದು, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಖುದ್ದು ಕಾರ್ಯಕ್ರಮ ನೋಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯ ಜನ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುತ್ತಿರುವ ಅಭಿಮಾನಿಗಳು, ತಮ್ಮ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿರುವ ಅಂಬಿಗೆ ಭಾವಪೂರ್ಣವಾಗಿ ಗೌರವ ಸಲ್ಲಿಸಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv