ಮಂಡ್ಯ: ಸಹಕಾರ ಸಂಘಗಳ ಉಪ ನಿಬಂಧಕ ಹುದ್ದೆಗಾಗಿ ಇದೀಗ ಜಟಾಪಟಿ ಏರ್ಪಟ್ಟಿದೆ. ಕೃಷ್ಣಮೂರ್ತಿ ಹಾಗೂ ವಿಕ್ರಮರಾಜೇ ಅರಸ್ ಎಂಬ ಇಬ್ಬರು ಅಧಿಕಾರಿಗಳ ನಡುವೆ ಕುರ್ಜಿಗಾಗಿ ವಾರ್ ನಡೆಯುತ್ತಿದೆ. ಮಂಡ್ಯದ ಸಹಕಾರ ಸಂಘಗಳ ಉಪ ನಿಬಂಧಕರಾಗಿ ಕೃಷ್ಣಮೂರ್ತಿ ಅವರು ಕಳೆದ ಐದು ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಸರ್ಕಾರ ಜನವರಿ 18 ರಂದು ಕೃಷ್ಣಮೂರ್ತಿ ಅವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಲಾಗಿತ್ತು.
ಈ ಹುದ್ದೆಗೆ ಮೈಸೂರಿನ ಕಾಫಿ ಸಂಸ್ಕರಣ ಸಹಕಾರ ಸಂಘದ ಉಪ ನಿಬಂಧಕರಾಗಿದ್ದ ವಿಕ್ರಮರಾಜೇ ಅರಸ್ ಅವರನ್ನು ಮುಂಬಡ್ತಿ ನೀಡಿ ಮಂಡ್ಯದ ಸಹಕಾರ ಸಂಘಗಳ ಉಪ ನಿಬಂಧಕರಾಗಿ ನೇಮಕ ಮಾಡಿತ್ತು. ನಂತರ ಜನವರಿ 20ರಂದು ಕೃಷ್ಣಮೂರ್ತಿ ಅವರ ಅನುಪಸ್ಥಿತಿಯಲ್ಲಿ ವಿಕ್ರಮರಾಜೇ ಅರಸ್ ಅವರು ಅಧಿಕಾರ ವಹಿಸಿಕೊಂಡಿದ್ದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೃಷ್ಣಮೂರ್ತಿ ನಾನು ಇಲ್ಲಿ ಕೆಲಸಕ್ಕೆ ಬಂದು ಐದು ತಿಂಗಳಾಗಿದೆ. ಹೀಗಿರುವಾಗ ಸರ್ಕಾರ ನನ್ನ ಇಷ್ಟು ಬೇಗ ವರ್ಗಾವಣೆ ಮಾಡುವಂತಿಲ್ಲ. ಒಬ್ಬರಿಗೆ ಮುಂಬಡ್ತಿ ನೀಡಬೇಕು ಎಂದರೆ ಖಾಲಿ ಇರುವ ಜಾಗಕ್ಕೆ ಹಾಕಬೇಕು ಎಂದು ಕೃಷ್ಣಮೂರ್ತಿ ಅವರು ಜನವರಿ 21 ರಂದು ಕೆಎಟಿ ಮೊರೆ ಹೋಗಿ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದರು. ಇದಕ್ಕೆ ಕೆಎಟಿ ತಡೆಯಾಜ್ಞೆ ನೀಡಿ ಯಥಾಸ್ಥಿತಿ ಕಾಯ್ದುಕೊಂಡು, ಕೃಷ್ಣಮೂರ್ತಿ ಅವರು ಕಾರ್ಯನಿರ್ಹಿಸಬೇಕೇಂದು ಆದೇಶ ನೀಡಿತ್ತು.
ವಿಕ್ರಮರಾಜೇ ಅರಸ್ ನನ್ನನ್ನು ಸರ್ಕಾರ ನೇಮಕ ಮಾಡಿದ್ದು, ಹೀಗಾಗಿ ನಾನು ಇಲ್ಲಿಯೇ ಕೆಲಸ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಒಪ್ಪದ ಕೃಷ್ಣಮೂರ್ತಿ ನಾನು ಕೆಲಸ ಮಾಡುತ್ತೇನೆ, ನೀವು ಹೊರಗೆ ಹೋಗಿ ಎಂದು ಹೇಳ್ತಾ ಇದ್ದಾರೆ. ಸದ್ಯ ಇಬ್ಬರು ಕಚೇರಿಗೆ ಬಂದು ಕುಳಿತುಕೊಂಡು ಕುರ್ಚಿಗಾಗಿ ವಾರ್ ಮಾಡುತ್ತಿದ್ದಾರೆ.