CrimeDistrictsKarnatakaLatestMandya

ಟೆಂಪೋ ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ- 6 ಮಂದಿ ಸಾವು

– ಹತ್ತು ಮಂದಿಗೆ ಗಂಭೀರ ಗಾಯ

ಮಂಡ್ಯ: ಟೆಂಪೋ ಹಾಗೂ ಟಾಟಾ ಸುಮೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 6 ಜನರು ಮೃತಪಟ್ಟ ಘಟನೆ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಬಳಿ ನಡೆದಿದೆ.

ಮೃತಪಟ್ಟಿರುವ ಆರು ಮಂದಿಯಲ್ಲಿ ಐವರನ್ನು ಬಾಕರ್ ಶರೀಫ್ (50), ಮೆಹಬೂಬ್ ಖಾನ್ (47), ನವ್ ಸಾದ್ (45), ಮಕ್ಸೂದ್ (35), ಪಾಯಿರ್ ಪಾಷಾ ಎಂದು ಗುರುತಿಸಲಾಗಿದೆ. ಈ ಪೈಕಿ ಓರ್ವ ಮೃತರ ಗುರುತು ಪತ್ತೆಯಾಗಿಲ್ಲ. ಆದರೆ ಮೃತರು ನಾಗಮಂಗಲ ತಾಲೂಕಿನವರು ಎಂದು ಮಾಹಿತಿ ಲಭ್ಯವಾಗಿದೆ.

ಟೆಂಪೋ ನಾಗಮಂಗಲದ ಸ್ಟಾರ್ ಗ್ರೂಪ್ ಕಂಪನಿಗೆ ಸೇರಿದ್ದು, ಚಾಲಕ ವೇಗವಾಗಿ ನಾಗಮಂಗಲದ ಕಡೆಗೆ ಹೋಗುತ್ತಿದ್ದ. ಇದೇ ವೇಳೆ ಆಲ್ಫನೊ ಎಂಬ ಹಣಕಾಸು ಸಂಸ್ಥೆಯ ಸದಸ್ಯರು ಸಂಸ್ಥೆಗೆ ಸೇರಿದ್ದ ಟಾಟಾ ಸುಮೋದಲ್ಲಿ ನಾಗಮಂಗಲ ಕಡೆಯಿಂದ ಬೆಳ್ಳೂರು ಕ್ರಾಸ್ ಕಡೆಗೆ ಪ್ರಯಾಣಿಸುತ್ತಿದ್ದರು. ಆದರೆ ನಾಗಮಂಗಲ ತಾಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದ ಬಳಿ ಚಾಲಕರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಟಾಟಾ ಸುಮೋ ಅರ್ಧ ಭಾಗ ಛಿದ್ರ ಛಿದ್ರವಾಗಿದೆ.

ಟಾಟಾ ಸುಮೋದ ಮುಂಭಾಗದಲ್ಲಿ ಕುಳಿತಿದ್ದವರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯನ್ನು ಕಂಡ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಪೈಕಿ ಇಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಟ್ಟು 10 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ 9 ಜನರ ಸ್ಥಿತಿ ಚಿಂತಾಜನಕವಾಗಿದೆ.

ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಮೃತ ಹಾಗೂ ಗಂಭೀರವಾಗಿ ಗಾಯಗೊಂಡವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳ್ಳೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published.

Back to top button