ನಗರಸಭೆ ಕರ ವಸೂಲಿಗಾರ ಲಕ್ಷಾಂತರ ರೂಪಾಯಿಯೊಂದಿಗೆ ಪರಾರಿ

Public TV
3 Min Read
mnd palike dokha 1

ಮಂಡ್ಯ: ನಗರಸಭೆಯ ಕರ ವಸೂಲಿಗಾರನೊಬ್ಬ ಲಕ್ಷಾಂತರ ರೂಪಾಯಿ ಕಂದಾಯ ಹಣವನ್ನು ದುರುಪಯೋಗ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರತಿಷ್ಠಿತ ಬ್ಯಾಂಕುಗಳ ಸೀಲುಗಳನ್ನು ನಕಲು ಮಾಡಿಕೊಂಡು ಹಣ ಎಗರಿಸಿರುವುದಲ್ಲದೆ, ಹಣಕಾಸಿಗೆ ಸಂಬಂಧಿಸಿದ ಸುಮಾರು 200 ರಿಂದ 300 ಕಡತಗಳೊಂದಿಗೆ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

ಕಳೆದೊಂದು ವರ್ಷದ ಹಿಂದೆಯೇ ಈ ಕೃತ್ಯ ನಡೆದಿದ್ದರೂ ನಗರಸಭೆ ಅಧಿಕಾರಿಗಳು ಗೌಪ್ಯತೆ ಕಾಯ್ದುಕೊಂಡು ಬಂದಿದ್ದು, ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡದೇ ಪ್ರಾಥಮಿಕ ಹಂತದಲ್ಲೇ ಪ್ರಕರಣವನ್ನು ಮುಚ್ಚಿ ಹಾಕಲು ಪಿತೂರಿ ನಡೆಸಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ಮೂಡಿವೆ.

mnd palike dokha

ನಾಲ್ಕು ವರ್ಷದ ಹಿಂದೆ ಕೋಲಾರ ನಗರಸಭೆಯಲ್ಲಿ ಕರ ವಸೂಲಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ರವಿ ಮಂಡ್ಯ ನಗರಸಭೆಗೆ ಹಂಗಾಮಿ ಕರ ವಸೂಲಿಗಾರನಾಗಿ ವರ್ಗಾವಣೆಗೊಂಡಿದ್ದನು. ಜನವರಿ 19 2015 ರಿಂದ ಫೆಬ್ರವರಿ 3 2019ರವರೆಗೆ ಕೆಲಸ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣವನ್ನು ಸಂಗ್ರಹಿಸಿ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್ ರವೀಂದ್ರ ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ಎಸ್.ರವಿ 4 ಫೆಬ್ರವರಿ 2019ರಿಂದ ಇಲ್ಲಿಯವರೆಗೆ ಅನಧಿಕೃತವಾಗಿ ಗೈರು ಹಾಜರಾಗಿದ್ದಾನೆ. ಕರ್ತವ್ಯಕ್ಕೆ ಹಾಜರಾಗುವಂತೆ ಹಾಗೂ ಅನಧಿಕೃತ ಗೈರು ಹಾಜರಿಗೆ ಲಿಖಿತ ಸಮಜಾಯಿಷಿ ನೀಡುವಂತೆ ನೋಟಿಸ್ ಜಾರಿಗೊಳಿಸಿದ್ದರೂ ಯಾವುದಕ್ಕೂ ಉತ್ತರ ಬಂದಿಲ್ಲ. ಆತ ಇದ್ದ ಸರ್ಕಾರಿ ನಿವಾಸವನ್ನು ಖಾಲಿ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.

mnd palike dokha 4

ಅವ್ಯವಹಾರ ನಡೆಸಿದ್ದು ಹೇಗೆ?
ನಾಲ್ಕು ವರ್ಷಗಳ ಹಿಂದೆ ಮಂಡ್ಯ ನಗರಸಭೆಗೆ ಹಂಗಾಮಿ ಕರ ವಸೂಲಿಗಾರನಾಗಿ ವರ್ಗಾವಣೆಗೊಂಡಿದ್ದ ಎಸ್.ರವಿ ಆರಂಭದಲ್ಲಿ ಖಾತಾ ವಿಷಯ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ಆ ಸಮಯದಲ್ಲಿ ನಗರಸಭೆ ಆಸ್ತಿಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲಕ್ಷಾಂತರ ರೂ. ನಗರಸಭೆಗೆ ನಷ್ಟ ಉಂಟುಮಾಡಿದ್ದ ಆರೋಪ ಕೇಳಿಬಂದಿತ್ತು. ಈ ದೂರಿನ ಆಧಾರದ ಮೇಲೆ ಈತನನ್ನು ಒಂದು ಮತ್ತು ಎರಡನೇ ವಿಭಾಗಕ್ಕೆ ಕರ ವಸೂಲಿಗಾರನಾಗಿ ನೇಮಕ ಮಾಡಲಾಗಿತ್ತು. ಪರಿಣಾಮ ಈತನು ತನ್ನ ಸಹಚರರಾದ ಪಳನಿಸ್ವಾಮಿ ಮತ್ತು ಮಹದೇವ ಅವರ ಜೊತೆಗೂಡಿ ಕಂದಾಯ ಕಟ್ಟಲು ಬಂದ ಆಸ್ತಿ ಮಾಲೀಕರಿಂದ ವಿವರ ಪಟ್ಟಿ ಹಾಗೂ ಚಲನ್‍ಗಳಿಗೆ ಪ್ರತಿಷ್ಠಿತ ಬ್ಯಾಂಕ್‍ಗಳಾದ ಆಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಸೀಲುಗಳನ್ನು ನಕಲಿ ಮಾಡಿ ಹಣ ಬಂದ ರೀತಿ ಖಾತೆದಾರರ ವಿವರ ಪಟ್ಟಿ, ಚಲನ್‍ಗಳಿಗೆ ನಕಲಿ ಸಹಿ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದ್ದಾನೆ ಎಂದು ತಿಳಿದುಬಂದಿದೆ.

mnd palike dokha 2

ರವಿ ಕರ ವಸೂಲಿಗಾರನಾಗಿ ಕಂದಾಯ ಹಣ ಪಡೆದು ಅವ್ಯವಹಾರ ನಡೆಸಿರುವ ಕುರಿತು ನಗರಸಭೆ ವ್ಯಾಪ್ತಿಯಲ್ಲೇ ತನಿಖೆ ನಡೆಸಲು ಕಚೇರಿ ವ್ಯವಸ್ಥಾಪಕ ಎಂ.ಮಹದೇವಯ್ಯ, ಲೆಕ್ಕಾಧೀಕ್ಷಕಿ ಕೆ.ಎಸ್.ಸುನೀತಾ, ಕಂದಾಯಾಧಿಕಾರಿ ಪಂಪಾಶ್ರೀ, ಲೆಕ್ಕಿಗ ಸಿ.ಎನ್ ರವಿ ಅವರನ್ನು ನೇಮಕ ಮಾಡಲಾಗಿತ್ತು. ತನಿಖಾ ತಂಡ ನೀಡಿದ ವರದಿಯಲ್ಲಿ ಖಾತೆದಾರರೊಬ್ಬರಿಂದ 20,051 ರೂಪಾಯಿಗಳನ್ನು ಎಕ್ಸಿಸ್ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು, ಆರೋಪಿ ರವಿ ತನ್ನ ಕೈ ಬರಹದಲ್ಲಿ 55,980 ರೂಪಾಯಿಗಳನ್ನು ಜಮಾ ಮಾಡಿರುವುದಾಗಿ ಆಸ್ತಿ ತೆರಿಗೆ ಪುಸ್ತಕದಲ್ಲಿ ದಾಖಲಾಗಿದೆ. ಕರ ವಸೂಲಿಗಾರ ನಿರ್ವಹಣೆ ಮಾಡುತ್ತಿದ್ದ 5 ಮತ್ತು 6ನೇ ವಿಭಾಗದ ಆಸ್ತಿ ವರ್ಗಾವಣೆ ಕಡತಗಳು ಹಾಗೂ ನಮೂನೆ-3 ನೀಡಿರುವ ಕಡತಗಳನ್ನು ಪರಿಶೀಲನೆಗೆ ಕೇಳಿದಾಗ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ ಕಡತಗಳು ಲಭ್ಯವಿಲ್ಲವೆಂಬ ಮಾಹಿತಿ ನೀಡಿದ್ದಾರೆ.

mnd palike dokha 3

ಪೊಲೀಸರಿಗೆ ದೂರು ನೀಡಿಲ್ಲ:
ನಗರಸಭೆಯಲ್ಲಿ ಪ್ರತಿಷ್ಠಿತ ಬ್ಯಾಂಕುಗಳ ನಕಲು ಸೀಲುಗಳನ್ನು ಬಳಸಿ ಸಂಗ್ರಹಿಸಿದ್ದ ಕಂದಾಯ ಹಣದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆಸಿ ನಗರಸಭೆಗೆ ವಂಚಿಸಿದ್ದರೂ ಪೌರಾಯುಕ್ತರು ಆರೋಪಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರಲಿಲ್ಲ. ಆತನ ವಿರುದ್ಧ ಯಾವುದೇ ಕ್ರಮವನ್ನೂ ಜರುಗಿಸಿರಲಿಲ್ಲ. ಆರೋಪಿ ರವಿ ಹಣದೊಂದಿಗೆ ಪರಾರಿಯಾಗುವುದಕ್ಕೆ ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಖಾಸಗಿ ದೂರಿನ ಆಧಾರದ ಮೇಲೆ ಮಂಡ್ಯ ಉಪವಿಭಾಗದ ಡಿವೈಎಸ್‍ಪಿ ನಗರಸಭೆ ಪೌರಾಯುಕ್ತ ಎಸ್.ಲೋಕೇಶ್ ಅವರಿಗೆ ಪತ್ರ ಬರೆದಿದ್ದರು. ಆ ನಂತರವೂ ಪೊಲೀಸರಿಗೆ ಆರೋಪಿ ವಿರುದ್ಧ ದೂರು ನೀಡದಿರುವುದು ಅನೇಕ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದೀಗ ಜಿಲ್ಲಾಧಿಕಾರಿ ವೆಂಕಟೇಶ್ ಅವರ ಸೂಚನೆ ಮೇರೆಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೋಲಾರ ನಗರಸಭೆಯಲ್ಲೂ ಕೈಚಳಕ:
ಕೋಲಾರ ನಗರಸಭೆಯಲ್ಲಿ ಕರ ವಸೂಲಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಕೂಡ ಆರೋಪಿ ತನ್ನ ಕೈಚಳಕ ತೋರಿಸಿದ್ದಾನೆ. ನಗರಸಭೆಯ ಕಂದಾಯ ಶಾಖೆಯಲ್ಲಿ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದ ಕಡತಗಳನ್ನು ರವಿ ನೋಡಿಕೊಳ್ಳುತ್ತಿದ್ದನು. ಫೆಬ್ರವರಿ 5 2015ರಂದು ಕರ್ತವ್ಯದಿಂದ ಬಿಡುಗಡೆಯಾಗುವ ಸಮಯದಲ್ಲಿ ಈ ಕಾರ್ಯಾಲಯಕ್ಕೆ ಯಾವುದೇ ಪ್ರಭಾರವನ್ನು ವಹಿಸಿಕೊಡದೆ ಹಾಗೂ ಸರ್ಕಾರಿ ದಾಖಲೆಗಳಾದ ಕಿರ್ದಿ ಪುಸ್ತಕ, ಬೇಡಿಕೆ ಸಹಿ, ಬಾಡಿಗೆ ವಸೂಲಿ ಮಾಡಿದ ರಸೀದಿ ಪುಸ್ತಕ, ಸರ್ಕಾರಿ ಹಣ ಹಾಗೂ ಸರ್ಕಾರಕ್ಕೆ ಮುಖ್ಯವಾದ ಹಣಕಾಸಿಗೆ ಸಂಬಂಧಿಸಿದ ಕಡತಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದನು. ಈ ಸಂಬಂಧ ಅಲ್ಲಿನ ಪೌರಾಯುಕ್ತರು ಗಲ್‍ಪೇಟೆ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಿಗೆ ದೂರು ನೀಡಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಯಾವುದೇ ಪ್ರಗತಿ ಇಂದಿಗೂ ಕಂಡುಬಂದಿಲ್ಲ.

Share This Article
Leave a Comment

Leave a Reply

Your email address will not be published. Required fields are marked *