ಮಂಡ್ಯ: ಕ್ಷುಲ್ಲಕ ಕಾರಣಕ್ಕೆ ಮೂವರು ವ್ಯಕ್ತಿಗಳು ಸೇರಿ ಯುವಕನಿಗೆ ಥಳಿಸಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಲಾಳನಕೆರೆ ಗ್ರಾಮದ ಬಳಿ ನಡೆದಿದೆ.
ಗೋವಿಂದರಾಜು, ಮಹೇಶ್ ಮತ್ತು ಕಾಂತರಾಜು ಎಂಬವರು ಶೇಖರ್ ಎಂಬಾತನಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೂವರು ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ಓಡಾಡುವ ದಾರಿಯ ವಿಷಯಕ್ಕೆ ಸಂಬಂಧಿಸಿದಂತೆ ನಡೆದಿರುವ ಗಲಾಟೆಯಲ್ಲಿ ಈ ಮೂವರು ಸೇರಿ ಶೇಖರ್ ನಿಗೆ ಥಳಿಸಿದ್ದಾರೆ. ಆದರೆ ಶೇಖರ್ ಒಬ್ಬನೇ ನಮ್ಮ ಮೂವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ದೂರು ನೀಡಲು ಠಾಣೆಗೆ ಬಂದಿದ್ದರು.
ಶೇಖರ್ ಸಾಕ್ಷಿ ಸಮೇತ ಮೂವರ ವಿರುದ್ಧ ದೂರು ನೀಡಿದ್ದು, ಮೊಬೈಲ್ ವಿಡಿಯೋದಿಂದ ಮೂವರು ಒಬ್ಬನಿಗೆ ಥಳಿಸುತ್ತಿರುವ ಸತ್ಯ ಬಹಿರಂಗವಾಗಿದೆ. ಈ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.