ಕೋಟಿಗಟ್ಟಲೇ ಅನುದಾನ ಕೊಟ್ಟರೂ ನೀಗದ ಸಮಸ್ಯೆ – 4 ದಿನಗಳಿಂದ ಮಂಡ್ಯದ ಮೈಶುಗರ್ ಸ್ಥಗಿತ

Public TV
2 Min Read
Mysugar Sugar Factory 3

– ಬಿಸಿಲಿನಲ್ಲೇ ಒಣಗುತ್ತಿವೆ ಕಬ್ಬುಗಳು

ಮಂಡ್ಯ: ರಾಜ್ಯದಲ್ಲಿ ಪ್ರತಿ ಸರ್ಕಾರ ಬಂದಾಗ ಮಂಡ್ಯದ (Mandya) ಮೈಶುಗರ್ (Mysugar Factory) ಕಾರ್ಖಾನೆಯ ಪುನಶ್ಚೇತನಕ್ಕೆ ಕೋಟಿಗಟ್ಟೆಲೇ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಆದರೆ ಇಲ್ಲಿರುವ ಸಮಸ್ಯೆಗಳು ಮಾತ್ರ ತಪ್ಪುವುದೇ ಇಲ್ಲ. ಇದೀಗ ಮೈಶುಗರ್ ಕಾರ್ಖಾನೆಯಲ್ಲಿ ಎದುರಾಗಿರುವ ಸಮಸ್ಯೆಯಿಂದ ಈ ಭಾಗದ ರೈತರು ಕಂಗಾಲಾಗಿದ್ದಾರೆ.

ಮೈಸೂರು ರಾಜರು ಕೊಡುಗೆ ನೀಡಿದ ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಉಳಿಸಿಕೊಳ್ಳಲು ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲವೂ ಕೋಟಿಗಟ್ಟಲೇ ಅನುದಾನವನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ಆದರೆ ಬಂದ ಅನುದಾನ ಎಲ್ಲಿಗೆ ಹೋಗುತ್ತೋ ಎನೋ ಗೊತ್ತಿಲ್ಲ. ಪ್ರತಿ ಬಾರಿಯೂ ಒಂದಲ್ಲಾ ಒಂದು ಸಮಸ್ಯೆಯಿಂದ ಮೈಶುಗರ್ ಸಕ್ಕರೆ ಕಾರ್ಖಾನೆ ಸುದ್ದಿಯಲ್ಲಿ ಇರುತ್ತದೆ.

ಪ್ರಸ್ತುತ ವರ್ಷದಲ್ಲಿ ಬೇಸಿಗೆ ಬಳಿಕ ಇದೇ ಆಗಸ್ಟ್ 2 ರಂದು ಮೈಶುಗರ್ ತನ್ನ ಕಾರ್ಯವನ್ನು ಆರಂಭಿಸಿತ್ತು. ಕಬ್ಬು ಬೆಳೆದ ರೈತರೆಲ್ಲರೂ (Farmers) ಫುಲ್ ಖುಷಿಯಿಂದ ತಾವು ಬೇಸಿಗೆಯಲ್ಲಿ ಕಷ್ಟ ಪಟ್ಟು ಬೆಳೆದ ಕಬ್ಬು (Sugarcane) ಬೆಳೆಗೆ ಬೆಲೆ ಸಿಗಲಿದೆ ಎಂಬ ಖುಷಿಯಲ್ಲಿ ಇದ್ದರು. ಆದರೆ ಅವರ ಖುಷಿಗೆ ತಣ್ಣೀರು ಎಸೆದಂತೆ ಇಲ್ಲಿನ ಅಧಿಕಾರಿಗಳು ತಾಂತ್ರಿಕ ಕಾರಣ ಹೇಳಿ ಕಾರ್ಖಾನೆಯನ್ನು ಸ್ಥಗಿತಗೊಳಿಸಿದ್ದಾರೆ. ಇದನ್ನೂ ಓದಿ: ಚುರುಕು ಪಡೆದ ಮುಡಾ ಹಗರಣದ ತನಿಖೆ – ಮೂರು ಪಕ್ಷದ ನಾಯಕರಿಗೆ ಈಗ ಭಯ

Mysugar Sugar Factory

ಕಳೆದ ಐದು ದಿನಗಳಿಂದ ಮೈಶುಗರ್ ಕಾರ್ಖಾನೆ ನಿಂತಿರುವ ಕಾರಣ, ಇಲ್ಲಿನ ಯಾರ್ಡ್‌ನಲ್ಲಿ ಸಾವಿರಾರು ಟನ್‌ ಕಬ್ಬು ಬಿಸಿಲಿನಲ್ಲಿ ಒಣಗುತ್ತಿದ್ದರೆ ಇನ್ನೊಂದೆಡೆ ಜಮೀನಿನಲ್ಲಿ ಕಟಾವು ಆದ ಕಬ್ಬು ಸಹ ಒಣಗುತ್ತಿದೆ. ಮಗದೊಂದೆಡೆ ಅವಧಿ ಮುಗಿದ ಕಬ್ಬಿನ ಬೆಳೆ ತನ್ನ ಆಯ ಮುಗಿದು ತೂಕವನ್ನು ಕಳೆದುಕೊಳ್ಳುತ್ತಿದೆ. ಹೇಗೋ ಬೇಸಿಗೆಯಲ್ಲಿ ನೀರಿಲ್ಲದೇ ಇದ್ದರೂ ಬೆವರು ಸುರಿಸಿ ಬೆಳೆದ ಕಬ್ಬು ಕಟಾವು ಆಗಿ ಫ್ಯಾಕ್ಟರಿಗೆ ಹೋಗಿ ಅಷ್ಟೋ ಇಷ್ಟೋ ದುಡ್ಡು ನೋಡಬಹದು ಎಂದುಕೊಂಡಿದ್ದ ರೈತರು ಹಾಕಿದ ಬಂಡವಾಳವು ಸಹ ಬಾರದ ಸ್ಥಿತಿಗೆ ತಲುಪಿದ್ದಾರೆ.

ಐದು ದಿನಗಳಿಂದ ಕಾರ್ಖಾನೆ ತಾಂತ್ರಿಕ ಕಾರಣದಿಂದ ಸ್ಥಗಿತವಾಗಿದೆ ಎಂದು ರೈತರಿಗೆ ಅಧಿಕಾರಿಗಳು ಉಡಾಫೆ ಉತ್ತರ ಕೊಡುತ್ತಿದ್ದಾರೆ. ಕಾರ್ಖಾನೆ ಯಾರ್ಡ್‌ನಲ್ಲಿ ಟ್ರಾಕ್ಟರ್, ಎತ್ತಿನ ಗಾಡಿಯಲ್ಲಿ ಇರುವ ಕಬ್ಬು ಬಿಸಿಲಿಗೆ ಒಣಗಿ ತನ್ನ ತೂಕ ಕಳೆದುಕೊಳ್ಳುತ್ತಿದೆ.

Sugarcane tractor

ನಾಲ್ಕೈದು ದಿನಗಳಿಂದ ಕಬ್ಬನ್ನು ತಂದಿರುವ ರೈತರಿಗೆ ಇಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಅಲ್ಲದೇ ಎತ್ತಿನ ಗಾಡಿಯಲ್ಲಿ ಬಂದ ಎತ್ತುಗಳಿಗೆ ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲ. ಕಬ್ಬು ಕಟಾವು ಮಾಡುವ ಕೂಲಿ ಕೆಲಸಕ್ಕೆ ಉತ್ತರ ಕರ್ನಾಟಕದಿಂದ ಬಂದಿರುವ ಕೂಲಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. 4 ವರ್ಷಗಳಿಂದ ಸ್ಥಗಿತವಾಗಿದ್ದ ಮೈ ಶುಗರ್‌ ಕಾರ್ಖಾನೆ 2022 ರಿಂದ ಆರಂಭವಾಗಿತ್ತು.

 

Share This Article