ಮಂಡ್ಯ: ಕ್ಯಾತನಹಳ್ಳಿ ಬರ್ಬರ ಹತ್ಯೆ ಪ್ರಕರಣದ ಪಾತಕಿ ಮೊಹಮದ್ ಇಬ್ರಾಹಿಂ ಕುರಿತ ಸ್ಫೋಟಕ ವಿಚಾರಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ಆನ್‌ಲೈನ್ ಗೇಮ್ ಸುಳಿಗೆ ಸಿಲುಕಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಇಬ್ರಾಹಿಂ ದರೋಡೆಗಾಗಿ ಹತ್ತು ಹಲವು ಊರು ಸುತ್ತಾಡುತ್ತಿದ್ದ ಸ್ಫೋಟಕ ವಿಚಾರ ತನಿಖೆ ವೇಳೆ ಬಯಲಾಗಿದೆ.
ಕ್ಯಾತನಹಳ್ಳಿಗೆ ಹೋಗುವ ಮುನ್ನ ಪಾತಕಿ ಇಬ್ರಾಹಿಂ ಒಂಟಿ ಮನೆಗಳನ್ನ ಗುರಿಯಾಗಿಸಿ ಹಲವು ಗ್ರಾಮಗಳಲ್ಲಿ ದರೋಡೆಗೆ ಹೊಂಚು ಹಾಕಿದ್ದ. ಇದಕ್ಕೆ ಪುಷ್ಟಿ ನೀಡುವಂತೆ ಆರೋಪಿ ಮರ ಕತ್ತರಿಸುವ ಯಂತ್ರವನ್ನಿಟ್ಟುಕೊಂಡು ಸುತ್ತಾಟ ನಡೆಸಿರುವ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಲಭ್ಯವಾಗಿದೆ.
ಸ್ಕೋಟರ್‌ನಲ್ಲಿ ಮರ ಕತ್ತರಿಸುವ ಯಂತ್ರ ಇಟ್ಟುಕೊಂಡು ಶ್ರೀರಂಗಪಟ್ಟಣದ ಚಂದಗಿರಿಕೊಪ್ಪಲು, ಸೇಬಿನಕುಪ್ಪೆ, ದರಸಗುಪ್ಪೆ ಸೇರಿ ಹತ್ತು ಹಲವು ಗ್ರಾಮಗಳಲ್ಲಿ ಸುತ್ತಾಡಿದ್ದ. ಒಂಟಿ ಮನೆಗಳನ್ನ ಗುರಿಯಾಗಿಸಿಕೊಂಡಿದ್ದ. ಆ ದಿನ ಮಧ್ಯಾಹ್ನ ಮೂರು ಗಂಟೆ ವೇಳೆ ಶ್ರೀರಂಗಪಟ್ಟಣದ ಚಂದಗಿರಿಕೊಪ್ಪಲಿನಲ್ಲಿ, ಸಂಜೆ 6 ಗಂಟೆ ವೇಳೆಗೆ ಕೆನ್ನಾಳು ಗ್ರಾಮಕ್ಕೆ ಎಂಟ್ರಿಕೊಟ್ಟಿದ್ದ. ಆದ್ರೆ ಒಂಟಿ ಮನೆಗಳ ಸಮೀಪ ಜನರ ಸಂಚಾರದಿಂದ ದರೋಡೆ ಯತ್ನ ವಿಫಲವಾಗಿತ್ತು. ಬಳಿಕ ತೋಟದ ಮನೆಗೆ ನುಗ್ಗಿ ರಮೇಶ್‌ನನ್ನ ಹತ್ಯೆಗೈದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ನಿವಾಸಿಯಾಗಿರುವ ಆರೋಪಿ ಇಬ್ರಾಹಿಂ, ಆನ್‌ಲೈನ್ ಗೇಮ್ ಸುಳಿಗೆ ಸಿಲುಕಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಮಾಡಿದ ಸಾಲ ತೀರಿಸಲು ದರೋಡೆಗೆ ಪ್ಲ್ಯಾನ್ ಮಾಡಿದ್ದ. ದರೋಡೆಗಾಗಿ ಮರ ಕತ್ತರಿಸುವ ಯಂತ್ರದೊಂದಿಗೆ ಮನೆಯೊಂದಕ್ಕೆ ಬಂದಿದ್ದ. ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನಕ್ಕಿಳಿದಿದ್ದ.
ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.