– ಮಕ್ಕಳಿಬ್ಬರನ್ನು ನಾಲೆಗೆ ತಳ್ಳಿ, ತಾನೂ ಆತ್ಮಹತ್ಯೆ ಮಾಡ್ಕೊಂಡ ತಾಯಿ
ಮಂಡ್ಯ: ತಾಯಿ ತನ್ನ ಇಬ್ಬರು ಮಕ್ಕಳನ್ನು ನಾಲೆಗೆ ತಳ್ಳಿ ಬಳಿಕ ತಾನೂ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ತಾಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಜರುಗಿದೆ.
ಹುಳ್ಳೇನಹಳ್ಳಿ ಗ್ರಾಮದ ಜ್ಯೋತಿ (33) ತನ್ನ ಮಕ್ಕಳಾದ ನಿಸರ್ಗ (7) ಮತ್ತು ಪವನ್ (4) ರನ್ನು ಕರೆದುಕೊಂಡು ಹೋಗಿ ಹುಲ್ಲೇನಹಳ್ಳಿ ಗ್ರಾಮದ ಬಳಿ ಇರುವ ವಿಸಿ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮನೆಯಲ್ಲಿ ಇದ್ದ ಜ್ಯೋತಿ ಮಗ ಪವನ್‍ನನ್ನು ಕರೆದುಕೊಂಡು ಮಗಳು ನಿಸರ್ಗ ಓದುತ್ತಿದ್ದ ಶಾಲೆಯ ಬಳಿ ಹೋಗಿ ನಿಸರ್ಗಳನ್ನು ದೇವಸ್ಥಾನಕ್ಕೆ ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದಾಳೆ. ನಂತರ ಹುಳ್ಳೇನಹಳ್ಳಿ ಗ್ರಾಮದ ಬಳಿ ಹರಿಯುವ ವಿಸಿ ನಾಲೆಗೆ ಮೊದಲು ಇಬ್ಬರು ಮಕ್ಕಳನ್ನು ಜ್ಯೋತಿ ತಳ್ಳಿದ್ದಾಳೆ. ನಂತರ ತಾನು ಕೂಡ ನಾಲೆಗೆ ಹಾರಿದ್ದಾಳೆ. ಇದನ್ನು ಕಂಡ ಸ್ಥಳೀಯರು ಮೂವರ ಪ್ರಾಣ ಉಳಿಸಲು ಮುಂದಾಗಿದ್ದಾರೆ. ಜ್ಯೋತಿಯನ್ನು ನಾಲೆಯಿಂದ ಮೇಲೆ ಎತ್ತಿ ಕಾಪಡಲು ಸ್ಥಳೀಯರು ಮುಂದಾಗಿದ್ದಾರೆ.
ಆದರೆ ಜ್ಯೋತಿ ಹೆಚ್ಚು ನೀರು ಕುಡಿದ್ದಿದ್ದರಿಂದ ಸಾವನ್ನಪ್ಪಿದ್ದಾಳೆ. ಮಕ್ಕಳು ಇದುವರೆಗೂ ಸಹ ಪತ್ತೆಯಾಗಿಲ್ಲ. ನೀರು ಭಾರೀ ಪ್ರಮಾಣದಲ್ಲಿ ಇರುವ ಕಾರಣ ಮಕ್ಕಳ ಶೋಧ ಕಾರ್ಯ ನಡೆಯುತ್ತಿದೆ. ಯಾವ ಕಾರಣಕ್ಕೆ ಈ ಪ್ರಕರಣ ಜರುಗಿದೆ ಎಂದು ತಿಳಿದು ಬಂದಿಲ್ಲ.
ಈ ಸಂಬಂಧ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.