ಕಾಣೆಯಾಗಿದ್ದ ಬಾಲಕ ಮಂಗಳಮುಖಿ ವೇಷದಲ್ಲಿ ಪತ್ತೆ

Public TV
1 Min Read
MND Mangalamuki 3

-ಬಾಲಕ ಸಿಕ್ಕಿದ್ದು ಹೇಗೆ?

ಮಂಡ್ಯ: ಸಂಚಾರಿ ವಿಜಯ್ ಅಭಿನಯದ ‘ನಾನು ಅವನಲ್ಲ ಅವಳು’ ಸಿನಿಮಿ ಶೈಲಿಯಲ್ಲಿಯೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೌದು, ಬೆಂಗಳೂರಿನಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕ ನಾಪತ್ತೆಯಾಗಿ, ಮಂಗಳಮುಖಿ ಆಗಿದ್ದಾನೆ.

ಆಗಿದ್ದೇನು?: ಕೆಆರ್ ಪೇಟೆ ತಾಲೂಕಿನ ಹಳ್ಳಿಯೊಂದರ ಬಾಲಕ ಬೆಂಗಳೂರಿನ ಚಿಕ್ಕಮ್ಮನ ಮನೆಯಲ್ಲಿದ್ದು 10ನೇ ತರಗತಿ ಓದುತ್ತಿದ್ದ. ಆದರೆ ಶಾಲೆಗೆ ರಜೆ ಇದ್ದಿದ್ದರಿಂದ 8 ತಿಂಗಳ ಹಿಂದೆ ಸ್ವಗ್ರಾಮಕ್ಕೆ ಮರಳಿದ್ದ. ಪೋಷಕರು, ಸಂಬಂಧಿಕರು, ಬಾಲ್ಯದ ಸ್ನೇಹಿತರೊಂದಿಗೆ ಕಾಲ ಕಳೆದಿದ್ದ. ರಜೆ ಮುಗಿಸಿ, ಬೆಂಗಳೂರಿಗೆ ಹೋಗುದಾಗಿ ಹೇಳಿ ಹೋಗಿದ್ದ ಬಾಲಕ ನಾಪತ್ತೆಯಾಗಿದ್ದ.

ಬಾಲಕ ನಾಪತ್ತೆಯಾಗಿದ್ದರಿಂದ ಗಾಬರಿಗೊಂಡ ಪೋಷಕರು, ಕೆಆರ್ ಪೇಟೆ ಪಟ್ಟಣದ ಠಾಣೆಗೆ ಪೋಷಕರು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಾಲಕನ ಪತ್ತೆಗಾಗಿ ಹುಡುಕಾಟ ನಡೆಸಿದ್ದರು. ಸುಮಾರು ದಿನಗಳು ಕಳೆದರೂ ಬಾಲಕ ಸಿಗದಿದ್ದರಿಂದ ಪೋಷಕರು ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದರು.

ಪೋಷಕರಿಗೆ ಬಾಲಕ ಸಿಕ್ಕಿದ್ದು ಹೇಗೆ?:
ಬಾಲಕನ ಗ್ರಾಮದ ಮಂಜು ಎಂಬವರು ಎಳೆನೀರು ಮಾರಾಟಕ್ಕೆ ಇಂದು ಕೆಆರ್ ಪೇಟೆಯ ಸಂತೆಗೆ ಬಂದಿದ್ದರು. ಈ ವೇಳೆ ಬಾಲಕ ಮಂಗಳಮುಖಿಯರ ಜೊತೆಗೆ ಅಂಗಡಿಗಳಲ್ಲಿ ಕಲೆಕ್ಷನ್ ಮಾಡುತ್ತಿರುವುದನ್ನು ಮಂಜು ನೋಡಿದ್ದಾರೆ. ಬಾಲಕನನ್ನು ಹಿಡಿಯಲು ಗ್ರಾಮಸ್ಥರು ಸೇರುತ್ತಿದ್ದಂತೆ, ಬಾಲಕ ಹಾಗೂ ಮಂಗಳಮುಖಿಯರು ಆಟೋದಲ್ಲಿ ಹತ್ತಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣವೇ ಗ್ರಾಮಸ್ಥರೊಬ್ಬರು ತಮ್ಮ ಬೈಕ್ ಏರಿ, ಆಟೋವನ್ನು ಹಿಂಬಾಲಿಸಿ ಹೊಸ ಕಿಕ್ಕೇರಿ ರಸ್ತೆಯಲ್ಲಿ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಳಿಕ ಕೆಆರ್ ಪೇಟೆ ನಗರ ಠಾಣೆಗೆ ಬಾಲಕ ಹಾಗೂ ಮಂಗಳಮುಖಿಯರನ್ನು ಕರೆತಂದಿದ್ದಾರೆ.

ಬಾಲಕನನ್ನು ತೃತೀಯ ಲಿಂಗಿಯಾಗಿ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಹಣ ವಸೂಲಿ ಮಾಡಲು ಬಾಲಕನನ್ನು ಕೆಲ ಮಂಗಳಮುಖಿಯರು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ವ್ಯಾಪಕ ತನಿಖೆ ನಡೆಸಿ, ಸತ್ಯ ಬಯಲಿಗೆಳೆಬೇಕು. ಮುಂದಿನ ದಿನಗಳಲ್ಲಿ ಅಪ್ರಾಪ್ತ ಬಾಲಕರು ಇಂತಹ ಕೃತ್ಯಕ್ಕೆ ಬಲಿಯಾಗದಂತೆ ತಡೆಯಬೇಕು ಎಂದು ಬಾಲಕನ ಪೋಷಕರ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತೃತೀಯ ಲಿಂಗಿಯಾಗಿ ಬದಲಾದ ಬಾಲಕನೊಂದಿಗೆ ಮೂವರು ತೃತೀಯ ಲಿಂಗಿಗಳು ಪೊಲೀಸರ ವಶದಲ್ಲಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *