ಮಂಡ್ಯ: ಮಗನ ಹುಟ್ಟ ಹಬ್ಬದವನ್ನು ಮಂಡ್ಯದ ಮನ್‍ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ರಾಜಕೀಯ ಶಕ್ತಿ ಪ್ರದರ್ಶನಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ಸ್ವಾಮಿ ಅವರ ಮಗ ದಿವಂಗತ ಶ್ರೀನಿಧಿಗೌಡ ಅವರ 25 ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಮದ್ದೂರಿನ ತಾಲೂಕು ಕ್ರೀಡಾಂಗಣದಲ್ಲಿ ಆರೋಗ್ಯ ಮೇಳವನ್ನು ಆಯೋಜನೆ ಮಾಡುವ ಮೂಲಕ ತಮ್ಮ ರಾಜಕೀಯ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಸ್ವಾಮಿ ಅವರ ಪುತ್ರ ಚಿಕ್ಕವಯಸ್ಸಿನಲ್ಲೇ ಮೃತ ಪಟ್ಟಿದ್ದು, ಅವರ ಹುಟ್ಟು ಹಬ್ಬದ ಹಿನ್ನೆಲೆ ಆರೋಗ್ಯ ಮೇಳವನ್ನು ಆಯೋಜನೆ ಮಾಡಿದ್ದರು. ಈ ಮೇಳದ ಮೂಲಕ ತನ್ನ ರಾಜಕೀಯ ಶಕ್ತಿ ಪ್ರದರ್ಶನ ಮಾಡಿ ಮದ್ದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಅಕಾಂಕ್ಷಿ ನಾನು ಎಂದು ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸಲು ಮುಂದಾಗಿದ್ದಾರೆ. ಈ ಆರೋಗ್ಯ ಮೇಳವನ್ನು ಡಿಸಿಎಂ ಅಶ್ವತ್ಥ್‍ನಾರಾಯಣ್ ಉದ್ಘಾಟನೆ ಮಾಡಿದ್ರು. ಮೇಳದಲ್ಲಿ ಮದ್ದೂರು ತಾಲೂಕಿನ ಸಾವಿರಾರು ಜನರು ಭಾಗವಹಿಸಿದ್ದರು.
Advertisement
Advertisement
ಮೇಳದ ಉದ್ಘಾಟನೆ ಬಳಿಕ ಮಾತನಾಡಿದ ಕೆಆರ್ ಪೇಟೆ ಶಾಸಕ ನಾರಾಯಣಗೌಡ, ಆರು ತಿಂಗಳಿಂದ ನನ್ನ ಅನರ್ಹ ಶಾಸಕ ಎಂದು ಹೇಳುತ್ತಿದ್ದರು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಯಡಿಯೂರಪ್ಪ, ಅಶ್ವತ್ಥ ನಾರಾಯಣ್ ಹಾಗೂ ವಿಜಯೇಂದ್ರ ಅವರ ಆಶೀರ್ವಾದಿಂದ ನಾನು ಗೆದ್ದಿದ್ದೇನೆ. ಶೀಘ್ರದಲ್ಲೇ ರಾಜ್ಯ ಸರ್ಕಾರ ನನ್ನ ಜಿಲ್ಲೆಯ ಉಸ್ತುವಾರಿ ಸಚಿವನನ್ನಾಗಿ ಮಾಡಲಿದೆ. ಆ ಮೂಲಕ ಕೆಆರ್ ಪೇಟೆ ಮಾತ್ರವಲ್ಲ, ಇಡೀ ಮಂಡ್ಯ ಜಿಲ್ಲೆಯನ್ನು ಯಾರು ಅಭಿವೃದ್ಧಿ ಮಾಡದ ರೀತಿ ನಾನು ಮಾಡುತ್ತೇನೆ ಎನ್ನುವ ಮೂಲಕ ಜೆಡಿಎಸ್ ನಾಯಕರಿಗೆ ಟಾಂಗ್ ನೀಡಿದರು. ಮುಂದುವರಿದು ಮಾತಾನಾಡಿದ ನಾರಾಯಣಗೌಡ, ಈಗ ಕೆಆರ್ ಪೇಟೆಯಲ್ಲಿ ಕಮಲ ಅರಳಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಮದ್ದೂರಿನಲ್ಲಿ ಕಮಲ ಅರಳುತ್ತದೆ. ಹೀಗೆ ಜಿಲ್ಲೆಯಲ್ಲಿ ಒಂದೊಂದಾಗಿ ಬಿಜೆಪಿ ಬಾವುಟ ಹಾರಲಿದೆ ಎಂದು ಭವಿಷ್ಯ ನುಡಿದರು.