ಮಂಡ್ಯ: ಕಾಲೇಜಿನ ಹಿಂಭಾಗದಲ್ಲೇ ವಿದ್ಯಾರ್ಥಿಯೊಬ್ಬ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ನಿವಾಸಿ ಮಹಾದೇವಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮಹಾದೇವಸ್ವಾಮಿ ಮಳವಳ್ಳಿಯ ಶಾಂತಿ ಕಾಲೇಜಿನಲ್ಲಿ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ. ಆದರೆ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವುದು ತಿಳಿದು ಬಂದಿಲ್ಲ.
ಶಾಂತಿ ಕಾಲೇಜಿನ ಹಿಂಭಾಗದಲ್ಲಿ ನೀಲಗಿರಿ ತೋಟವಿದೆ. ಅಲ್ಲಿ ಇಂದು ಯಾರು ಇಲ್ಲದೇ ಇದ್ದಾಗ ಮಹಾದೇವಸ್ವಾಮಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹಾದೇವಸ್ವಾಮಿ ಮೃತ ದೇಹವನ್ನು ನೋಡಿದ ಕೆಲವರು ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕಾಲೇಜಿನ ಸಿಬ್ಬಂದಿ ಮೃತ ಯುವಕ ಮಹಾದೇವಸ್ವಾಮಿ ಎಂದು ಖಚಿತ ಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಆಗಮಿಸಿದ ಮಳವಳ್ಳಿ ಗ್ರಾಮಾಂತರ ಠಾಣೆಯ ಪೊಲೀಸರು, ಪರಿಶೀಲನೆ ನಡೆಸಿ ಮಹಾದೇವಸ್ವಾಮಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.