Crime
ಬೈಕ್-ಸ್ಕೂಟಿ ಮುಖಾಮುಖಿ ಡಿಕ್ಕಿ: ಓರ್ವನ ಕಾಲ್ಬೆರಳು ಕಟ್

– ಮತ್ತೊಬ್ಬನ ಮೂಗಿನಿಂದ ಸುರಿದ ರಕ್ತ
ಮಂಡ್ಯ: ಬೈಕ್ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ವಾಹನದ ಸವಾರರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದಿದೆ.
ಮಳವಳ್ಳಿ ಪಟ್ಟಣದ ನಿವಾಸಿ ದಕ್ಷಿಣ ಮೂರ್ತಿ (75) ಹಾಗೂ ಲೋಕೇಶ್ ಗಂಭೀರ ಗಾಯಗೊಂಡವರು. ಮಳವಳ್ಳಿ ಪಟ್ಟಣದ ಮದ್ದೂರು ಸರ್ಕಲ್‍ನಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ಕೈತಪ್ಪಿದೆ.
ಬೈಕ್ ಹಾಗೂ ಸ್ಕೂಟಿ ಸವಾರರು ವೇಗವಾಗಿ ಬರುತ್ತಿದ್ದರು. ಈ ವೇಳೆ ಮದ್ದೂರು ಸರ್ಕಲ್‍ನಲ್ಲಿ ನಿಯಂತ್ರಣ ತಪ್ಪಿದ ಪರಿಣಾಮ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ದಕ್ಷಿಣ ಮೂರ್ತಿ ಅವರ ಕಾಲ್ಬೆರಳು ತುಂಡಾಗಿ ಬಿದ್ದಿದ್ದು, ಲೋಕೇಶ್ ಮೂಗಿಗೆ ಗಂಭೀರ ಗಾಯವಾಗಿ ಭಾರೀ ಪ್ರಮಾಣದಲ್ಲಿ ರಕ್ತಸ್ರಾವವಾಗಿದೆ.
ಘಟನಾ ಸ್ಥಳದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ದಕ್ಷಿಣ ಮೂರ್ತಿ ಹಾಗೂ ಲೋಕೇಶ್‍ನನ್ನು ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸ್ಕೂಟಿ ಹಾಗೂ ಬೈಕ್ ಜಖಂಗೊಂಡಿವೆ. ಈ ಸಂಬಂಧ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
