ಮಂಡ್ಯ: ನಟಿ, ಮಾಜಿ ಸಂಸದೆ ರಮ್ಯಾಗೆ ಮಂಡ್ಯ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು ಹಾಕಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ರಮ್ಯಾ 5 ಲಕ್ಷ ಮತಗಳನ್ನ ಪಡೆದು ಗೆದ್ದಿದ್ದರು. ಅಂಬರೀಶ್ ಕಾಂಗ್ರೆಸ್‍ಗೆ ದ್ರೋಹ ಮಾಡಿ ಜೆಡಿಎಸ್‍ನ್ನ ಗೆಲ್ಲಿಸಿದ್ರು. ಮಂಡ್ಯ ಋಣ ತೀರಿಸಲು ಕೆಲವರಿಗೆ ಅವಕಾಶವಿತ್ತು, ಋಣನೂ ತೀರಿಸಲಿಲ್ಲ, ಕೆಲಸನೂ ಮಾಡಿಲ್ಲ. ನಾವು ಕಾಂಗ್ರೆಸ್‍ನಲ್ಲಿದ್ದೇವೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ರು.
Advertisement
Advertisement
ರಮ್ಯಾ ಅಥವಾ ನಾನು ಇಲ್ಲಿ ಸೋಲಿಸೋಕೆ ಏನೂ ಇಲ್ಲ. ನಮ್ಮ ಮಂಡ್ಯ ಮತದಾರರು ತುಂಬಾ ಬುದ್ಧಿವಂತರಿದ್ದಾರೆ. ಮಂಡ್ಯ ಜಿಲ್ಲೆಗೆ ಮಾತ್ರವಲ್ಲ ಇಡೀ ದೇಶಕ್ಕೆ ರಮ್ಯಾ ಸೋತಿದ್ದಕ್ಕೆ ಕಾರಣ ಯಾರು, ಸೋಲಿಸಿದವರು ಯಾರು ಎಂದು ಗೊತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಂದ ಸರ್ವನಾಶ ಆಗಿದೆ. 7 ಶಾಸಕರು ಯಾರಿಂದ ಸೋತಿದ್ದರು. ಮಂಡ್ಯದಲ್ಲಿ ನಮ್ಮ 5 ಲಕ್ಷ ಮತದಾರರು ಯಾರಿಂದ ಅನಾಥರಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಇಲ್ಲದಂತೆ ಮಾಡಿದ್ದು ಯಾರು ಎಂದು ಮಂಡ್ಯ ಜನತೆಗೆ ಗೊತ್ತಾಗಿದೆ. ಹೀಗಾಗಿ ನಾವೇನೂ ಹೇಳಕ್ಕಾಗಲ್ಲ. ಅವರೇ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ರು.
Advertisement
Advertisement
ನಾನು ಮಣ್ಣಿನ ನಿಜವಾದ ಮಗಳು. ಈ ಭೂಮಿಗೋಸ್ಕರ ನಾವು ಈ ಜನಕ್ಕೆ ಕೆಲಸ ಮಾಡಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದವರು. ನಮಗೆ ಬೇಕಾದಂತೆ ಬದುಕಬಹುದಿತ್ತು. ಯಾಕಂದ್ರೆ ವೈಭವ, ದುಡ್ಡು ಎಲ್ಲವೂ ಇತ್ತು. ಇವುಗಳನ್ನೆಲ್ಲಾ ಬಿಟ್ಟು ಮಂಡ್ಯ ಜಿಲ್ಲೆಗೆ ಸೇವೆ ಮಾಡಬೇಕು ಎಂದು ಬಂದೆವು. ಹಾಗೆಯೇ ಒಂದು ಅವಕಾಶನೂ ಕೊಟ್ಟರು. ಯಾರ್ಯಾರು ಎಷ್ಟೆಷ್ಟೋ ಗೆದ್ದಿದ್ದರೂ ಬೇಕಾದಷ್ಟು ಸಮಯವಿತ್ತು. ಕೆಲವರಿಗೆ ಋಣ ತೀರಿಸಲು, ಕೆಲಸ ಮಾಡಲು ಸಮಯವಿತ್ತು. ಆದ್ರೆ ಯಾರೂ ಏನೂ ಮಾಡಿಲ್ಲ ಎಂದು ಭಾವುಕರಾದ್ರು.
ಮಂಡ್ಯ ಜನತೆ ದಡ್ಡರಲ್ಲ. ತುಂಬಾ ಬುದ್ಧಿವಂತರಾಗಿದ್ದು, ಯೋಚನೆ ಮಾಡುವ ಶಕ್ತಿ ಇದೆ. ಇಂದು ರಮ್ಯಾ ಅವರಿಗೆ ಯಾಕೆ ಅವಕಾಶ ಸಿಕ್ಕಿಲ್ಲ ಎಂದು ಜಿಲ್ಲೆಯ ಜನತೆಗೆ ಗೊತ್ತಿದೆ. ರಮ್ಯಾರನ್ನು ಯಾರು ಸೋಲಿಸಿದ್ರು, ಯಾರು ನಮ್ಮ ಕೈ ಬಿಟ್ಟರು ಇವೆಲ್ಲ ಜನತೆಗೆ ಗೊತ್ತಿದೆ. ಜಿಲ್ಲೆಯ ಜನರಿಗೆ ಇನ್ನೂ ನಮ್ಮ ಮೇಲೆ ಪ್ರೀತಿ, ಕರುಣೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಮೈತ್ರಿ ಧರ್ಮ ಪಾಲಿಸುವುದು ನಮ್ಮ ಧರ್ಮವಾಗಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯನ್ನು ನಮ್ಮದೇ ಅಭ್ಯರ್ಥಿ ಎಂದು ತಿಳಿದುಕೊಂಡು, ಮಂಡ್ಯದಲ್ಲಿ ಅವರನ್ನು ಗೆಲ್ಲಿಸುವುದಕ್ಕೆ ಬೆಂಬಲಿಸುತ್ತೇವೆ. ಸದ್ಯ ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರ ಮಾಡೋದಿಕ್ಕೆ ಬಂದಿದ್ದೇನೆ ಅಂದ್ರು.