ಮಂಡ್ಯ ಅಂದ್ರೆ ಇಂಡಿಯಾ ಈ ಮಾತು ಅಕ್ಷರಶಃ ಸತ್ಯ. ಕರ್ನಾಟಕ ರಾಜಕಾರಣದಲ್ಲಿ ಮಂಡ್ಯದಲ್ಲಿ ನಡೆಯುವಂತಹ ರಾಜಕೀಯ ರಂಗು ಬೇರೆಯಲ್ಲೂ ಕಾಣಲೂ ಸಾಧ್ಯವಿಲ್ಲ. ಮಂಡ್ಯ ಅಖಾಡದಲ್ಲಿ ರಾಜಕೀಯ ತಂತ್ರ ಕುತಂತ್ರ, ಮನರಂಜನೆ ಪ್ಲಸ್ ಜಿದ್ದಾಜಿದ್ದಿ, ರಂಗು ರಂಗಿನ ಪ್ರಚಾರ ಎಲ್ಲವೂ ಮಿಕ್ಸ್ ಮಸಾಲ. ಊರ ಹಬ್ಬದಂತೆ ರಾಜಕಾರಣ ಮಾಡುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಇಲ್ಲಿ ತನಕ 20 ಲೋಕಸಭೆ ಚುನಾವಣೆಗಳು ನಡೆದಿದ್ದು, ಇದರಲ್ಲಿ ನಾಲ್ಕು ಉಪಚುನಾವಣೆಗಳು ನಡೆದಿವೆ.
ಮೊದಲ ಉಪಚುನಾವಣೆ ನಡೆದಿದ್ದು 1968ರಲ್ಲಿ. ಶಿವನಂಜಪ್ಪ ಅವರ ನಿಧನದಿಂದ ತೆರವಾದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್.ಎಂ.ಕೃಷ್ಣ ಪ್ರಜಾ ಸೊಶಿಯಲಿಸ್ಟ್ ಪಾರ್ಟಿಯಿಂದ ಗೆದ್ದಿದ್ದರು. ಶಿವನಂಜಪ್ಪ ನಾಲ್ಕು ಬಾರಿ, ಅಂಬರೀಶ್ ಮೂರು ಬಾರಿ, ಎಸ್.ಎಂ. ಕೃಷ್ಣ, ಜಿ.ಮಾದೇಗೌಡ ತಲಾ 2 ಬಾರಿ ಇದುವರೆಗೆ ಗೆದ್ದಿದ್ದಾರೆ. ಕಾಂಗ್ರೆಸ್ ವರ್ಸಸ್ ಜೆಡಿಎಸ್ ನಡುವಿನ ಜಿದ್ದಾಜಿದ್ದಿನ ಅಖಾಡದಲ್ಲೀಗ ವ್ಯತಿರಿಕ್ತವಾದ ಸನ್ನಿವೇಶ ನಿರ್ಮಾಣವಾಗಿದೆ.
Advertisement
Advertisement
ನಾಯಕರ ಮಟ್ಟದಲ್ಲಿ ಜೆಡಿಎಸ್, ಕಾಂಗ್ರೆಸ್ ಒಂದಾಗಿ ಚುನಾವಣೆ ಎದುರಿಸುತ್ತಿದ್ದು, ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗಿಳಿದಿದ್ದಾರೆ. ಪಕ್ಷೇತರರಾಗಿ ಅಂಬರೀಶ್ ಪತ್ನಿ ಸುಮಲತಾ ಕಣದಲ್ಲಿದ್ದಾರೆ.
Advertisement
ಸುಮಲತಾಗೆ ಬಿಜೆಪಿ ಬೆಂಬಲ ಕೊಟ್ಟಿರೋದು ವಿಶೇಷ. ಮಂಡ್ಯದ ಗೌಡ್ತಿ, ಅಂಬರೀಶ್ ಪತ್ನಿ, ಹುಚ್ಚೇಗೌಡರ ಸೊಸೆ ಅಂತ ಸುಮಲತಾ ಮತ ಕೇಳುತ್ತಿದ್ರೆ, ನಾವೇ ನಿಜವಾದ ಒಕ್ಕಲಿಗರು, ನಮ್ಮಿಂದಲೇ ಜಿಲ್ಲೆ ಅಭಿವೃದ್ಧಿ ಅಂತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ ಕೇಳುತ್ತಿದ್ದಾರೆ. ಸದ್ಯ ಜಿದ್ದಾಜಿದ್ದಿನ ಹೋರಾಟವಿದ್ದು, ಯಾರು ಗೆಲ್ಲಾರೋ….? ಯಾರು ಸೋಲ್ತಾರೋ? ಅನ್ನೋದು ಕೊನೆ ಕ್ಷಣದವರೆಗೂ ಸಸ್ಪೆನ್ಸ್.
Advertisement
* ಮಂಡ್ಯ ಕ್ಷೇತ್ರದ ಒಟ್ಟು ಮತದಾರರು
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 17,22,476 ಮತದಾರರಿದ್ದು, ಇದರಲ್ಲಿ ಪುರುಷ ಮತದಾರರು 8,62,098 ಮತ್ತು ಮಹಿಳಾ ಮತದಾರರು 8,59,519 ಇದ್ದಾರೆ. ಜಾತಿವಾರು ನೋಡೋದಾದ್ರೆ ಒಕ್ಕಲಿಗ ಸಮುದಾಯ 8.10 ಲಕ್ಷ, ಎಸ್.ಸಿ ಸಮುದಾಯ 3.50 ಲಕ್ಷ, ಲಿಂಗಾಯತ ಸಮುದಾಯ 1 ಲಕ್ಷ, ಕುರುಬ ಸಮುದಾಯ 1 ಲಕ್ಷ, ಮುಸ್ಲಿಂ ಸಮುದಾಯ 90 ಸಾವಿರ, ಬೆಸ್ತ ಸಮುದಾಯ 40 ಸಾವಿರ, ಬ್ರಾಹ್ಮಣ ಸಮುದಾಯ 30 ಸಾವಿರ, ವಿಶ್ವಕರ್ಮ ಸಮುದಾಯ 30ಸಾವಿರ, ಇತರೆ ಸಮುದಾಯ 1.30 ಲಕ್ಷ ಜನರಿದ್ದಾರೆ.
ಜೆಡಿಎಸ್ ಪ್ರಾಬಲ್ಯ: ಮಂಡ್ಯ ಲೋಕ ಅಖಾಡ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಎಂಟರಲ್ಲಿ ಜೆಡಿಎಸ್ ಪಕ್ಷದ ಶಾಸಕರಿದ್ದಾರೆ. ಮಂಡ್ಯ- ಶ್ರೀನಿವಾಸ್, ಮದ್ದೂರು- ಡಿ.ಸಿ.ತಮ್ಮಣ್ಣ, ನಾಗಮಂಗಲ- ಸುರೇಶ್ಗೌಡ, ಶ್ರೀರಂಗಪಟ್ಟಣ- ರವೀಂದ್ರ ಶ್ರೀಕಂಠಯ್ಯ, ಮೇಲುಕೋಟೆ – ಸಿ.ಎಸ್.ಪುಟ್ಟರಾಜು, ಮಳವಳ್ಳಿ – ಅನ್ನದಾನಿ, ಕೆ.ಆರ್.ಪೇಟೆ – ನಾರಾಯಣಗೌಡ, ಕೆ.ಆರ್.ನಗರ – ಸಾ.ರಾ.ಮಹೇಶ್ ಶಾಸಕರಾಗಿದ್ದಾರೆ. ಇದರಲ್ಲಿ ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್ ಮತ್ತು ಡಿ.ಸಿ.ತಮ್ಮಣ್ಣ ಸಚಿವ ಸಂಪುಟದಲ್ಲಿಯೂ ಸ್ಥಾನ ಪಡೆದಿದ್ದಾರೆ.
2014ರ ಚುನಾವಣೆ: 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಜಿದ್ದಾಜಿದ್ದಿ ನಡೆದಿತ್ತು. ಕಾಂಗ್ರೆಸ್ನಿಂದ ರಮ್ಯಾ ಮತ್ತು ಜೆಡಿಎಸ್ ನಿಂದ ಸಿ.ಎಸ್.ಪುಟ್ಟರಾಜು ಸ್ಪರ್ಧೆ ಮಾಡಿದ್ದರು. 5,518 ಮತಗಳ ಅಂತರದಲ್ಲಿ ಸಿ.ಎಸ್.ಪುಟ್ಟರಾಜು ಗೆಲುವು ಸಾಧಿಸಿದ್ದರು.
2018ರ ಉಪಚುನಾವಣೆ ಫಲಿತಾಂಶ: ಸಿ.ಎಸ್.ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ 2018ರಲ್ಲಿ ಉಪ ಚುನಾವಣೆ ನಡೆದಿತ್ತು. ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಿಂದಾಗಿ ಕಾಂಗ್ರೆಸ್ ಸ್ಪರ್ಧೆಯಿಂದ ಹಿಂದೆ ಸರಿದಿತ್ತು. ಜೆಡಿಎಸ್ ನಿಂದ ಎಲ್.ಆರ್ ಶಿವರಾಮೇಗೌಡರು ಮತ್ತು ಬಿಜೆಪಿಯಿಂದ ಡಾ.ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರು. 3,24,943 ಮತಗಳ ಅಂತರದಿಂದ ಎಲ್.ಆರ್.ಶಿವರಾಮೇಗೌಡರು ಜಯದ ಮಾಲೆ ಧರಿಸಿದ್ದರು.
2019ರ ಕದನ: ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ, ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್, ಬಿಎಸ್ಪಿ ಅಭ್ಯರ್ಥಿ ನಂಜುಂಡಸ್ವಾಮಿ ಸೇರಿದಂತೆ ಒಟ್ಟು 22 ಮಂದಿ ಕಣದಲ್ಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಪಕ್ಷೇತರ ಅಭ್ಯರ್ಥಿಗೆ ಬಿಜೆಪಿ ಬೆಂಬಲ ಸೂಚಿಸಿದೆ.
ನಿಖಿಲ್ ಕುಮಾರಸ್ವಾಮಿ:
ಪ್ಲಸ್ ಪಾಯಿಂಟ್: ಮೈತ್ರಿ ಅಭ್ಯರ್ಥಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರಿಗೆ ಮೊದಲ ಚುನಾವಣೆ. ತಂದೆ ಕುಮಾರಸ್ವಾಮಿ ಮುಖ್ಯಮಂತ್ರಿ, ತಾತ ದೇವೇಗೌಡರ ನಾಮಬಲ ಹೊಂದಿದ್ದಾರೆ. 8 ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರು ಇರೋದು ನಿಖಿಲ್ ಅವರಿಗೆ ಪ್ಲಸ್ ಪಾಯಿಂಟ್. ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದಿದ್ದು, ಕ್ಷೇತ್ರದಲ್ಲಿ ತಮ್ಮದೇ ಪಕ್ಷದ ಮೂವರು ಸಚಿವರನ್ನು ಹೊಂದಿದ್ದಾರೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಜೆಡಿಎಸ್ ಹೊಂದಿದೆ.
ನಿಖಿಲ್ ಮೈನಸ್ ಪಾಯಿಂಟ್ : ನಿಖಿಲ್ ರಾಜಕಾರಣಕ್ಕೆ ಹೊಸಬ ಅನ್ನೋದು, ವಯಸ್ಸು ಚಿಕ್ಕದು. ಇನ್ನು ಕ್ಷೇತ್ರದಲ್ಲಿ ಕುಟುಂಬ ರಾಜಕಾರಣದ ಪ್ರಚಾರ ಹೆಚ್ಚು ಚರ್ಚೆ ಆಗುತ್ತಿದೆ. ಕುಮಾರಸ್ವಾಮಿ ಅವರ ಟೀಂ ಸಚಿವರು, ಶಾಸಕರ ಅತಿಯಾದ ಮಾತುಗಳು ಮತಗಳನ್ನು ಸೆಳೆಯುವಲ್ಲಿ ವಿಫಲವಾಗಬಹುದು. ಮೈತ್ರಿ ಎಂದು ಗುರುತಿಸಿಕೊಂಡಿದ್ದರೂ, ಕಾಂಗ್ರೆಸ್ನ ಕೆಲವರು ಒಳ ಏಟು ಕೊಡುವ ಆತಂಕವಿದೆ. ಇತ್ತ ಎದುರಾಳಿ ಸುಮಲತಾ ಪರ ಅನುಕಂಪದ ಅಲೆ ಮತ್ತು ಸ್ಟಾರ್ ಕ್ಯಾಂಪೇನ್ ಹೊಡೆತ ನೀಡುವ ಸಾಧ್ಯತೆಗಳಿವೆ.
ಸುಮಲತಾ ಅಂಬರೀಶ್:
ಪ್ಲಸ್ ಪಾಯಿಂಟ್: ನಟ ಅಂಬರೀಶ್ ಪತ್ನಿ, ಅನುಂಕಪದ ಅಲೆಯ ಪ್ರಚಾರವಿದೆ. ಸ್ಟಾರ್ ನಟರಾದ ದರ್ಶನ್, ಯಶ್ ಮಂಡ್ಯ ಕದನಕ್ಕಿಳಿದು ಸುಮಲತಾರ ಪರವಾಗಿ ಪ್ರಚಾರ ನಡೆಸುತ್ತಿರುವುದು. ಕಾಂಗ್ರೆಸ್ನ ಕೆಲ ನಾಯಕರು, ಸ್ಥಳೀಯ ಮಟ್ಟದಲ್ಲಿ ಒಳ ಬೆಂಬಲ ಸಿಕ್ಕಿದೆ. ಬಿಜೆಪಿ ಬೆಂಬಲ, ಕೆಲ ಕಡೆ ರೈತ ಸಂಘದ ಬಾಹ್ಯ ಬೆಂಬಲ ಸಿಕ್ಕಿರೋದು. ಇವುಗಳೆಲ್ಲ ಜೊತೆ ಮಹಿಳಾ ಮತದಾರರ ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ.
ಮೈನಸ್ ಪಾಯಿಂಟ್: ಕುಮಾರಸ್ವಾಮಿ ಮತ್ತವರ ತಂಡವನ್ನು ಎದುರಿಸಲು ನಾಯಕರು ಇಲ್ಲದಿರೋದು. ತಳಮಟ್ಟದ ಕಾರ್ಯಕರ್ತರ ಪಡೆಯ ರಚನೆ ಕಷ್ಟ ಸಾಧ್ಯವಾಗಿರೋದು. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮುಖಂಡರು ನೇರವಾಗಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರಕ್ಕೆ ಇಳಿದಿರೋದು ಮತಗಳ ವಿಂಗಡನೆ ಸಾಧ್ಯತೆ. ಸುಮಲತಾ ಚಿಹ್ನೆ 20ನೇ ಸ್ಥಾನದಲ್ಲಿ ಇರೋದು ಗೊಂದಲ ಉಂಟುಮಾಡಬಹದು. ಎದುರಾಳಿ ಅಭ್ಯರ್ಥಿ ಬಳಿ ಇರುವ ಸರ್ಕಾರದ ಬಲ ಪ್ಲಸ್ ಶಾಸಕರ ಬಲ ಹೊಂದಿದ್ದಾರೆ.