ಮಂಡ್ಯ: ಕೆ.ಆರ್.ಎಸ್ ಅಣೆಕಟ್ಟಿನಿಂದ ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರನ್ನು ಹೊರ ಬಿಟ್ಟಿರುವುದರಿಂದ ಇತಿಹಾಸ ಪ್ರಸಿದ್ಧ ವೆಲ್ಲೆಸ್ಲಿ ಸೇತುವೆ ಮುಳುಗುವ ಭೀತಿಯಲ್ಲಿದೆ.
ವೆಲ್ಲೆಸ್ಲಿ ಸೇತುವೆ ಸ್ಪರ್ಶಿಸಿ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಇದೇ ರೀತಿ ಹೊರ ಹರಿವು ಹೆಚ್ಚಾದರೆ ಇತಿಹಾಸ ಪ್ರಸಿದ್ಧವಾದ ಈ ಸೇತುವೆ ಮುಳುಗಡೆಯಾಗುತ್ತದೆ. ಸೇತುವೆಯ ಅಕ್ಕ ಪಕ್ಕ ಇರುವ ತೋಟಗಳು ಸಂಪೂರ್ಣ ಜಲಾವೃತವಾಗಿದೆ.
Advertisement
Advertisement
ತೆಂಗಿನ ಮರದ ಅರ್ಧದವರೆಗೂ ನೀರು ಆವರಿಸಿದೆ. ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ವೆಲ್ಲೆಸ್ಲಿ ಸೇತುವೆ ಬಳಿ ಪ್ರವಾಸಿಗರು, ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸೇತುವೆಯ ಎರಡೂ ಬದಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ. ಕೆ.ಆರ್.ಎಸ್ ನಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ವೆಲ್ಲಿಸ್ಲಿ ಸೇತುವೆ ಬಳಿಯಿರುವ ರಾಮಕೃಷ್ಣ ಮಠ ಕೂಡ ಜಲಾವೃತವಾಗಿದೆ.
Advertisement
ಕೆ.ಆರ್.ಸಾಗರ ಇಂದಿನ ನೀರಿನ ಮಟ್ಟ 118.75 ಅಡಿ ಇದೆ. 1,87,721 ಕ್ಯೂಸೆಕ್ ಒಳಹರಿವು ಇದ್ದರೆ 1,19,997 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. 124.80 ಅಡಿ ಗರಿಷ್ಠ ಎತ್ತರದ ಡ್ಯಾಂನಲ್ಲಿ ಪ್ರಸ್ತುತ 41.484 ಟಿಎಂಸಿ ನೀರು ಸಂಗ್ರಹಗೊಂಡಿದೆ.